ಹೊಸದಿಗಂತ ವರದಿ, ಕುಶಾಲನಗರ:
ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ, ಹಾರಂಗಿ ಜಲಾಶಯದಿಂದ ನೀರು ಬಿಡುಗಡೆಯ ಎಚ್ಚರಿಕೆ ಘಂಟೆಯ ನೂತನ ಗೋಪುರವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಮಳೆಗಾಲದಲ್ಲಿ ಹಾರಂಗಿ ಜಲಾಶಯದ ನೀರು ಬಿಡುಗಡೆಯ ಸಂದರ್ಭದಲ್ಲಿ ಶಬ್ಧ ( ಸೈರನ್) ಮಾಡಿ ಅಚ್ಚುಕಟ್ಟು ಪ್ರದೇಶದ 5 ಕಿ.ಮೀ.ವ್ಯಾಪ್ತಿಯ ಜನರಿಗೆ ಮುನ್ನೆಚ್ಚರಿಕೆ ನೀಡಲು ಈ ಗಂಟೆ ನೆರವಾಗಲಿದೆ ಎಂದು ಶಾಲೆಯ ಅಧಿಕಾರಿ ಮಾಹಿತಿ ನೀಡಿದರು.
ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಸಂದರ್ಭದಲ್ಲಿ ಹೆಚ್ಚುವರಿಯಾದ ನೀರನ್ನು ಅಧಿಕಾರಿ ವರ್ಗದವರು ನದಿಗೆ ಹರಿಸುವ ಮೊದಲು ಕೆಳ ಭಾಗದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲು ಹಾರಂಗಿಯಲ್ಲಿ ಎಚ್ಚರಿಕೆ ಗಂಟೆ(ಸೈರನ್) ಮಾಡಲು ಅಲ್ಲಿನ ಗಣಕೀಕೃತ ಬಟನ್ ಒತ್ತಲಿದ್ದು, ಅದೇ ಸಂದರ್ಭದಲ್ಲಿ ಕೂಡಿಗೆಯಲ್ಲಿರುವ ಸೈನಿಕ ಶಾಲೆಯ ಎಚ್ಚರಿಕೆ ಗಂಟೆಯೂ ಸಹ ಶಬ್ಧ ಮಾಡುವಂತೆ ಹೊಸ ತಂತ್ರಜ್ಞಾನದ ಉಪಕರಣಗಳನ್ನು ಇದರಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸೈನಿಕ ಶಾಲೆ ಕೂಡಾ ಹಾರಂಗಿ ನದಿ ದಂಡೆಗೆ ಹೊಂದಿಕೊಂಡಂತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೂ ಇದರ ಪ್ರಯೋಜನವಾಗಲಿದೆ.
ಈ ಸಂದರ್ಭ ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ.ಕಣ್ಣನ್, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕೆ.ಆರ್.ಮಂಜುಳಾ, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್ ಹಾಜರಿದ್ದರು.