ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧ ಮಾಡಿರುವುದನ್ನು ಎಲ್ಲ ಹಿಂದೂಪರ ಸಂಘಟನೆ ಸೇರಿದಂತೆ ಶ್ರೀರಾಮ ಸೇನಾ ತೀವ್ರವಾಗಿ ಖಂಡಿಸುವುದು. ಕೂಡಲೇ ರಾಜ್ಯ ಸರ್ಕಾರ ಅಗಸ್ಟ್ 29 ರೊಳಗೆ ಅನುಮತಿ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಎಲ್ಲ ಸಚಿವರು, ಶಾಸಕರ ಮನೆಗೆ ಗೇರಾವ್ ಹಾಕಲಾಗುವುದು ಎಂದು ಶ್ರೀರಾಮ ಸೇನಾ ಹುಬ್ಬಳ್ಳಿ ನಗರ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
ನಗರದಲ್ಲಿಂದು ಶ್ರೀರಾಮ ಸೇನಾ ಹುಬ್ಬಳ್ಳಿ ಹಾಗೂ ಶಾಮಿಯಾನ ಸಪ್ಲಾಯರ್ ಅಸೋಸಿಯೇಷನ್ ಹುಬ್ಬಳ್ಳಿ ಜಂಟಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಎಲ್ಲ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ ನೂರಾರು ವರ್ಷಗಳ ಪರಂಪರೆಯ ಸಾರ್ವಜನಿಕ ಗಣೇಶೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧ ಮಾಡಿದ್ದು ಖಂಡನೀಯ. ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬದವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.
ಮೂರ್ತಿಕಾರರು ನಾಲ್ಕೈದು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸಿದ್ದಾರೆ. ಅವರ ಪರಿಸ್ಥಿತಿ ಏನು. ಶಾಮಿಯಾನ ವಿದ್ಯುತ್ ದೀಪ, ವಾದ್ಯವೃಂದ ಮುಂತಾದ ಸಂಪ್ರದಾಯಿಕ ಕಲೆಗಳ ಅವಲಂಬಿತ ಕುಟುಂಬಗಳು ಕೂಡ ಈ ಹಬ್ಬದ ಮೇಲೆ ಅವಲಂಬಿತರಾಗಿರುವುದರಿಂದ ಅವರ ಸ್ಥಿತಿ ಚಿಂತಾಜನಕವಾಗುತ್ತದೆ. ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್, ಚಿತ್ರಮಂದಿರ, ಚುನಾವಣೆ, ರಾಜಕೀಯ ಸಮಾವೇಶ, ಶಾಲಾ-ಕಾಲೇಜುಗಳು ಮುಂತಾದವುಗಳು ನಡೆಯುತ್ತಿವೆಯೋ ಅದೇ ರೀತಿ ಗಣೇಶ ಉತ್ಸವ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಆಚರಿಸಲು ಅಗಸ್ಟ್ 29 ರೊಳಗೆ ಅನುಮತಿ ನೀಡಬೇಕು.
ಇಲ್ಲವಾದರೆ ಶ್ರೀರಾಮ ಸೇನಾ ಸೇರಿದಂತೆ ರಾಜ್ಯದ ವಿವಿಧ ಹಿಂದೂಪರ ಸಂಘಟನೆಗಳು ಅಗಸ್ಟ್ 30 ರಿಂದಲೇ ಶಾಸಕರು, ಸಚಿವರ ಮನೆಗೆ ತೆರಳಿ ಗೇರಾವ್ ಹಾಕಿ, ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಮುಖರಾದ ರಾಜು ಗಾಡಗೋಳಿ, ಅಪ್ಪಣ್ಣ ದಿವಟಗಿ, ಅಭಿಷೇಕ ಕಾಂಬಳೆ, ಶಾಮಿಯಾನ ಸಪ್ಲಾಯರ್ಸ್ ಅಸೋಸಿಯೇಷನ್ ಹುಬ್ಬಳ್ಳಿ ಅಧ್ಯಕ್ಷ ಗಂಗಾಧರ ಪ್ರಸಾದ್, ಮಹಮ್ಮದ್ ಸಾಜಿದ್ ಗುಬ್ಬಿ ಸೇರಿದಂತೆ ಮುಂತಾದವರು ಇದ್ದರು.