Tuesday, July 5, 2022

Latest Posts

ಪರಿಷ್ಕೃತ ಲಸಿಕೆ ಕಾರ್ಯಸೂಚಿ – ನೀವು ತಿಳಿದಿರಬೇಕಾದ ನಾಲ್ಕು ಸಂಗತಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಾಯಂಕಾಲ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿ ಪರಿಷ್ಕೃತ ಲಸಿಕೆ ನೀತಿಯನ್ನು ಘೋಷಿಸಿದಾಗಿನಿಂದ ಈವರೆಗೆ ಆ ಬಗ್ಗೆ ಅನೇಕ ಚರ್ಚೆಗಳಾಗಿವೆ. ಹಲವು ತಥ್ಯಗಳು, ಅಂಕಿಅಂಶಗಳು ಮುನ್ನೆಲೆಗೆ ಬಂದಿವೆ. ಪ್ರತಿಪಕ್ಷಗಳ ಥರಹೇವಾರಿ ಪ್ರತಿಕ್ರಿಯೆಗಳ ಬರದಲ್ಲಿ ನಿಮ್ಮ ಗಮನಕ್ಕೆ ಬಾರದೇ ಹೋಗಬಹುದಾದ ಕೆಲವು ಅಂಶಗಳ ಟಿಪ್ಪಣಿ ಇಲ್ಲಿದೆ.

ಬೇಜವಾಬ್ದಾರಿ ಮೆರೆದರೆ ರಾಜ್ಯಗಳು ಬೆಲೆ ತೆರಬೇಕು
ಪ್ರಧಾನಿ ಮೋದಿ ಭಾಷಣದ ಬೆನ್ನಲ್ಲೇ ಕೇಂದ್ರದಿಂದ ಹೊಸ ಲಸಿಕೆ ನೀತಿಯ ಮಾರ್ಗದರ್ಶಿ ಸೂತ್ರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆ ಪ್ರಕಾರ, ಕೇಂದ್ರದಿಂದ ರಾಜ್ಯಗಳಿಗೆ ವಿತರಿಸಲಾಗುವ ಉಚಿತ ಲಸಿಕೆ ಡೋಸುಗಳನ್ನು ಆಯಾ ರಾಜ್ಯಗಳ ರೋಗ ತೀವ್ರತೆ ಜತೆಗೆ ಲಸಿಕೆ ನೀಡುವಿಕೆಯಲ್ಲಿನ ಕ್ಷಮತೆ ಪರಿಗಣಿಸಿ ನೀಡಲಾಗುವುದು. ಲಸಿಕೆ ಡೋಸುಗಳನ್ನು ನಷ್ಟ ಮಾಡುವ ರಾಜ್ಯಗಳ ಪಾಲಿಗೆ ಲಸಿಕೆ ವಿತರಣೆ ಪ್ರಮಾಣ ನಕಾರಾತ್ಮಕವಾಗಿರುತ್ತದೆ.
ಈ ನಿಯಮ ಏಕೆ ಮುಖ್ಯ ಎಂಬುದನ್ನು ಗಮನಿಸಿ. ಜಾರ್ಖಂಡ, ಛತ್ತೀಸಗಢದಂಥ ರಾಜ್ಯಗಳು ಲಸಿಕೆ, ಕೊರೋನಾ ನಿರ್ವಹಣೆ ಕುರಿತು ಏನಕೇನ ಕೇಂದ್ರ ಸರ್ಕಾರವನ್ನು ದೂಷಿಸಿದವು. ಆದರೆ ಕೇಂದ್ರದಿಂದ ಬಂದ ಲಸಿಕೆ ವಿತರಣೆ ಸಂದರ್ಭದಲ್ಲಿ ಮಾತ್ರ ಶೇ.30ರಷ್ಟು ಡೋಸುಗಳನ್ನು ವ್ಯರ್ಥ ಮಾಡಿದವು.
ಇದೀಗ ಕೇಂದ್ರದಿಂದ ಪುಕ್ಕಟೆ ಲಸಿಕೆ ಪಡೆದು ಆನಂತರವೂ ಅದನ್ನು ಸರಿಯಾಗಿ ನಿರ್ವಹಿಸದೇ ವೈಫಲ್ಯವನ್ನು ಕೇಂದ್ರದ ತಲೆಗೆ ಕಟ್ಟುವ ರಾಜಕೀಯ ಆಟಗಳಿಗೆ ಕಡಿವಾಣ ಬೀಳಲಿದೆ. ಮೊದಲಿಗೆ ಕಳುಹಿಸಿದ ಲಸಿಕೆಗಳನ್ನು ಎಷ್ಟು ಸಮಪ್ರಕವಾಗಿ ಬಳಸಿಕೊಂಡರೆಂಬ ಆಧಾರದಲ್ಲಿ ರಾಜ್ಯಗಳಿಗೆ ಮುಂದಿನ ಹಂತದ ಡೋಸುಗಳು ಸಿಗುತ್ತವೆ.

ರಾಜ್ಯಗಳಿಗೆ ತಪ್ಪಿದ ಆರ್ಥಿಕ ಭಾರ
ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಲಸಿಕೆ ಡೋಸುಗಳನ್ನು ಒದಗಿಸುವುದರಿಂದ ರಾಜ್ಯಗಳು ಭರಿಸಬೇಕಿದ್ದ ಸುಮಾರು 30,000 ಕೋಟಿ ರುಪಾಯಿಗಳ ಭಾರ ಒಟ್ಟಾರೆ ಕಡಿಮೆಯಾಗಿದೆ. ಕೇಂದ್ರ ಎಲ್ಲರ ಪರವಾಗಿ ದೊಡ್ಡಮಟ್ಟದ ಲಸಿಕೆ ವ್ಯವಹಾರವನ್ನು ಕಂಪನಿಗಳಿಗೆ ನೀಡುತ್ತಾದ್ದರಿಂದ ಅದು ಸ್ಪರ್ಧಾತ್ಮಕ ಬೆಲೆಗೇ ಲಸಿಕೆ ಖರೀದಿಸುವ ಭರವಸೆ ಇದೆ. ಹೀಗಾಗಿ ಇಲ್ಲೂ ಸರ್ಕಾರದ ಹಣ ಕಡಿಮೆ ಪ್ರಮಾಣದಲ್ಲಿ ಖರ್ಚಾಗುತ್ತದೆ ಎಂದು ನಿರೀಕ್ಷಿಸಬಹುದು.

ಡೋಸು ಖಚಿತಪಡಿಸಿಕೊಂಡ ಮುಂಚಿತ ಆರ್ಡರ್
ನೀತಿ ಆಯೋಗ ಹೇಳಿರುವ ಪ್ರಕಾರ ಅದಾಗಲೇ ಭಾರತ ಸರ್ಕಾರ 25 ಕೋಟಿ ಕೋವಿಶೀಲ್ಡ್, 19 ಕೋಟಿ ಕೊವ್ಯಾಕ್ಸಿನ್ ಹಾಗೂ ಇನ್ನೂ ಅನುಮತಿ ಪಡೆಯಬೇಕಿರುವ ಬಯಾಲಜಿಕಲ್ ಇ ಕಂಪನಿಯ 30 ಕೋಟಿ ಲಸಿಕೆ ಡೋಸುಗಳಿಗೆ ಆರ್ಡರ್ ನೀಡಿಯಾಗಿದೆ. ಡಿಸೆಂಬರಿನೊಳಗೆ ಎಲ್ಲ ಅರ್ಹ ಭಾರತೀಯರಿಗೆ ಲಸಿಕೆ ನೀಡುವ ಭಾರತ ಸರ್ಕಾರದ ಬದ್ಧತೆಗೆ ಸರಿಹೊಂದುವ ನಡೆ ಇದಾಗಿದೆ.

ಬೆತ್ತಲಾದ ಕಾಂಗ್ರೆಸ್ಸಿನ ಸುಳ್ಳುಗಳು
ನರೇಂದ್ರ ಮೋದಿಯವರ ಪರಿಷ್ಕೃತ ಲಸಿಕೆ ನೀತಿ ತಮ್ಮ ಒತ್ತಡದ ಫಲವಾಗಿ ಬಿಜೆಪಿ ತೆಗೆದುಕೊಂಡ ಯೂಟರ್ನ್ ಎಂಬ ವಾದಕ್ಕಿಳಿದಿದೆ ಕಾಂಗ್ರೆಸ್. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಮಾಜಿ ಅರ್ಥ ಸಚಿವ ಪಿ. ಚಿದಂಬರಂ ಈ ದಾಟಿಯ ವಾದ ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ಸಿನ ಈ ಮೊದಲಿನ ಲಸಿಕೆ ನೀತಿಯನ್ನು ಉದಾಹರಿಸಿರುವ ನೆಟ್ಟಿಗರು, ನಿಜಕ್ಕೂ ಯೂಟರ್ನ್ ಮಾಡಿರುವುದು ಕಾಂಗ್ರೆಸ್ ಅಲ್ಲವೇ ಅಂತ ಕೇಳುವಂತಾಗಿದೆ. ಏಕೆಂದರೆ ಲಸಿಕೆ ವಿತರಣೆಯನ್ನು ವಿಕೇಂದ್ರೀಕರಿಸಿ, ರಾಜ್ಯಗಳಿಗೆ ಖರೀದಿಯ ಅವಕಾಶ ಕೊಡಬೇಕು ಎಂದು ರಾಹುಲ್ ಗಾಂಧಿ, ಆನಂದ್ ಶರ್ಮಾ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss