ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ನಿಧನರಾಗಿ 21 ದಿನಗಳು ಕಳೆದಿವೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಕೂಡ ರಾಕೇಶ್ ಪೂಜಾರಿ ಅವರು ನಟಿಸುತ್ತಿದ್ದರು. ಆದರೆ ರಾಕೇಶ್ ನಿಧನರಾದಾಗ ಈ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಅಂತಿಮ ದರುಶನ ಪಡೆಯಲು ಬರಲಿಲ್ಲ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಇದೀಗ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ.
ರಾಕೇಶ್ ಪೂಜಾರಿ ನಿಧನರಾಗಿ 21 ದಿನಗಳು ಕಳೆದ ಬಳಿಕ ಅವರ ಮನೆಗೆ ರಿಷಬ್ ಶೆಟ್ಟಿ ಬಂದಿದ್ದಾರೆ. ಇಂದು (ಜೂನ್ 2) ರಾಕೇಶ್ ಪೂಜಾರಿ ಕುಟುಂಬಸ್ಥರಿಗೆ ರಿಷಬ್ ಶೆಟ್ಟಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಾಥ್ ನೀಡಿದರು. ಉಡುಪಿಯ ಹೂಡೆಯಲ್ಲಿ ರಾಕೇಶ್ ಪೂಜಾರಿ ಮನೆ ಇದೆ. ಅಲ್ಲಿ ರಾಕೇಶ್ ತಂಗಿ ಮತ್ತು ತಾಯಿ ವಾಸವಾಗಿದ್ದಾರೆ. ಅವರಿಗೆ ರಿಷಬ್ ಶೆಟ್ಟಿ ಸಾಂತ್ವನ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಾಕೇಶ್ ಪೂಜಾರಿ ಅವರಿಗೂ ಒಂದು ವಿಶೇಷ ಪಾತ್ರ ನೀಡಲಾಗಿತ್ತು. ಶೂಟಿಂಗ್ನಲ್ಲಿ ಕೂಡ ಅವರು ಪಾಲ್ಗೊಂಡಿದ್ದರು. ಈ ಸಿನಿಮಾ ಮೇಲೆ ಅವರು ಸಖತ್ ಭರವಸೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ನಿಧನರಾದರು.
ಆಪ್ತರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ರಾಕೇಶ್ ಪೂಜಾರಿ ಅವರಿಗೆ ಹೃದಯಾಘಾತ ಸಂಭವಿಸಿತು. ಅವರ ಸಾವಿನ ಸುದ್ದಿ ಕೇಳಿ ಚಿತ್ರರಂಗಕ್ಕೆ ಶಾಕ್ ಆಯಿತು. ಆದರೆ ಅಂತ್ಯಕ್ರಿಯೆಗೆ ರಿಷಬ್ ಶೆಟ್ಟಿ ಬಂದಿರಲಿಲ್ಲ. ಅಂಥ ಸಂದರ್ಭದಲ್ಲೂ ರಿಷಬ್ ಶೆಟ್ಟಿ ಭೇಟಿ ನೀಡಲಿಲ್ಲ ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಟೀಕೆ ಕೇಳಿಬಂದಿತ್ತು.