ಅಂಪೈರ್‌ ಜೊತೆಗೆ ನೋಬಾಲ್‌ ರಾದ್ಧಾಂತ; ಡೆಲ್ಲಿ ನಾಯಕ ರಿಷಭ್ ಪಂತ್‌ಗೆ ʼಬ್ಯಾನ್‌ʼ ಶಿಕ್ಷೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶುಕ್ರವಾರ ರಾತ್ರಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 15 ರನ್ ಗಳಿಂದ ಸೋಲು ಕಂಡಿತ್ತು. ಪಂದ್ಯದ ಕೊನೆ ಓವರ್‌ ನಲ್ಲಿ ನಡೆದ ನೋ ಬಾಲ್‌ ವಿವಾದ ಈಗ ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನ ರಾಯಲ್ಸ್‌ ನೀಡಿದ್ದ 223 ರನ್‌ ಗಳ ಬೃಹತ್‌ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಪಂದ್ಯದ ಕಡೆಯ ಓವರ್‌ ನಲ್ಲಿ 36 ರನ್‌ ಬೇಕಿತ್ತು. ಈ ವೇಳೆ ಆಲ್‌ರೌಂಡರ್‌ ರೋವ್ಮನ್‌ ಪೋವೆಲ್‌ ಕ್ರೀಸ್‌ ನಲ್ಲಿದ್ದರು. ಒಬೆದ್‌ ಮೆಕಾಯ್‌ ಎಸೆದ ಆ ಓವರ್‌ ನ ಮೊದಲ ಎರಡೂ ಎಸೆತಗಳನ್ನು ಪೊವೆಲ್‌ ಸಿಕ್ಸರ್‌ ಗಟ್ಟಿದರು. ಮೂರನೇ ಎಸೆತದಲ್ಲಿ ಎದೆಯೆತ್ತರಕ್ಕೆ ಬಂದ ಹೈ ಫುಲ್‌ ಟಾಸ್‌ ಅನ್ನೂ ಸಿಕ್ಸರ್‌ ಗಟ್ಟಿದರು. ಆದರೆ ಅಂಪೈರ್‌ ಗಳು ಆ ಎಸೆತ ನೋಬಾಲ್‌ ಎಂಬುದನ್ನು ಪರಿಶೀಲಿಸಲಿಲ್ಲ. ಇದು ಡೆಲ್ಲಿ ಡಗ್‌ ಔಟ್‌ ಆಕ್ರೋಶಕ್ಕೆ ಕಾರಣವಾಯಿತು. ಸೊಂಟಕ್ಕಿಂತಲೂ ಮೇಲಿದ್ದ ಎಸೆತವನ್ನು ನೋಬಾಲ್‌ ಎಂದು ಘೋಷಿಸುವಂತೆ ಡೆಲ್ಲಿ ವಾಗ್ವಾದಕ್ಕಿಳಿಯಿತು. ಈ ವೇಳೆ ಅಂಪೈರ್‌ ಗಳ ಮೇಲೆ ಕೋಪೋದ್ರಿಕ್ತರಾದ ಡೆಲ್ಲಿ ನಾಯಕ ರಿಷಭ್ ಪಂತ್‌ ತಮ್ಮ ಬ್ಯಾಟ್ಸ್‌ ಮನ್‌ ಗಳಾದ ಪೊವೆಲ್‌ ಹಾಗೂ ಕುಲ್ದೀಪ್‌ ಯಾದವ್‌ಗೆ ಪೆವಿಲಿಯನ್‌ಗೆ ವಾಪಸ್ಸಾಗುವಂತೆ ಸೂಚನೆ ನೀಡಿದರು.

 

ಆ ವೇಳೆ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಮೈದಾನದೊಳಕ್ಕೆ ಪ್ರವೇಶಿಸಿ ಆ ಎಸೆತವನ್ನು ಮೂರನೇ ಅಂಪೈರ್‌ ನಿರ್ಣಯಕ್ಕೆ ನೀಡುವಂತೆ ಒತ್ತಾಯಿಸಿದರು. ಆದರೆ ಆನ್‌ ಫೀಲ್ಡ್‌ ಅಂಪೈರ್‌ ಗಳು ತಮ್ಮ ನಿರ್ಣಯವನ್ನು ಬದಲಿಸಲಿಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಪಂದ್ಯ ಮಂದುವರೆದು ಡೆಲ್ಲಿ ಅಂತಿಮವಾಗಿ 16 ರನ್‌ ಗಳ ಸೋಲು ಕಂಡಿತು. ರಿಷಬ್‌ ಪಂತ್‌ ವರ್ತನೆ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.
ಐಪಿಎಲ್‌ ನೀತಿಸಂಹಿತೆ ಉಲ್ಲಂಘನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಐಪಿಎಲ್‌ ಆಡಳಿತ ಮಂಡಳಿಯು ಲೆವೆಲ್‌ 2 ನಿಯಮ ಉಲ್ಲಂಘನೆಗೆ ರಿಷಬ್‌ ಪಂತ್‌ ರನ್ನು ಒಂದು ಐಪಿಎಲ್‌ ಪಂದ್ಯದಿಂದ ಬ್ಯಾನ್‌ ಮಾಡಿದೆ. ಅಲ್ಲದೆ ಪಂದ್ಯದ ಸಂಪೂರ್ಣ ಸಂಭಾವನೆಯನ್ನು ಕಡಿತಗೊಳಿಸಿದೆ. ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೆ ಪಂದ್ಯದ ಶುಲ್ಕದ 100 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ವೇಗಿ ಶಾರ್ದೂಲ್ ಠಾಕೂರ್ ಅವರ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!