ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಕೀಪರ್, ಬ್ಯಾಟ್ಸಮನ್ ರಿಷಭ್ ಪಂತ್ ಮತ್ತೆ ಮೈದಾನಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಗಂಭೀರ ಕಾರು ಅಫಘಾತಕ್ಕೊಳಗಾಗಿದ್ದ ಪಂತ್ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.
ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ರಿಷಭ್ ಪಂತ್, ಇದೀಗ ಜಿಮ್‌ನಲ್ಲಿ ಪವರ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪಘಾತವಾಗಿ ಕೆಲವೇ ತಿಂಗಳುಗಳಲ್ಲಿ ಎಲ್ಲರೂ ಬೆರಗಾಗುವ ರೀತಿಯಲ್ಲಿ ಪವರ್‌ಲಿಫ್ಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ಪವರ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ಜತೆ ರಿಷಭ್ ಪಂತ್, ಏನು ಕೆಲಸ ಮಾಡುತ್ತೀಯೋ ಅದರ ಪ್ರತಿಫಲ ನಿನಗೆ ಸಿಗುತ್ತದೆಯೇ ಹೊರತು, ನೀನು ಬಯಸಿದ್ದಲ್ಲ” ಎಂದು ಬರೆದುಕೊಂಡಿದ್ದಾರೆ.
ರಿಷಭ್ ಪಂತ್ ಕ್ರಿಕೆಟ್‌ನಿಂದ ದೂರವೇ ಉಳಿದು 7 ತಿಂಗಳುಗಳೇ ಕಳೆದಿವೆ. ಡಿಸೆಂಬರ್ 30ರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಪಂತ್ ಗಂಭೀರವಾಗಿಯೇ ಗಾಯಗೊಂಡಿದ್ದರು. ಕೆಲವು ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಪಂತ್ ಸ್ವತಂತ್ರವಾಗಿ ಓಡಾಡಲಾರಂಭಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ರಿಷಭ್ ಪಂತ್, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್, ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬಿದ್ದಿದ್ದರು. ಇನ್ನು ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಪಂತ್ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.