ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಕೋಲಾರ:
ನಗರದ ಅಭಿವೃದ್ದಿ ದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ನ್ಯಾಯಾಲಯಕ್ಕೆ ಹೋಗಿರುವವರು ಕೇಸ್ ವಾಪಸ್ಸು ಪಡೆದು ಸಹಕರಿಸಿ, ವಿನಾಕಾರಣ ಕಾಮಗಾರಿ ತಡವಾಗುವುದನ್ನು ತಪ್ಪಿಸಿ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮನವಿ ಮಾಡಿದರು.
ನಗರದ ಬಂಗಾರಪೇಟೆ ವೃತ್ತದಿಂದ ಕ್ಲಾಕ್ ಟವರ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಬಂಧ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಚುರುಕುಗೊಳಿಸುವಂತೆ ಸೂಚನೆ ನೀಡಿ ಮಾತನಾಡುತ್ತಿದ್ದರು.
ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಇಕ್ಕೆಲಗಳಲ್ಲಿ ಗುರುತಿಸಿರುವ ಗಡಿ ರೇಖೆಯವರೆಗೆ ಮನೆ, ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಗುತ್ತಿಗೆದಾರರ ಸಮ್ಮುಖದಲ್ಲಿ ಅಳತೆ ಮಾಡಿ ಪರಿಶೀಲಿಸಲಾಯಿತು.
ಸ್ಥಳೀಯ ನಿವಾಸಿಯೊಬ್ಬರು ರಾತ್ರೋ ರಾತ್ರಿ ತಮ್ಮ ಆಸ್ತಿಯ ಸಂಬಂಧ ನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಇದೆ ಎಂದು ಬರೆದಿರುವ ಬಗ್ಗೆಯೂ ಪರಿಶೀಲನೆ ನಡೆಸಿದರಲ್ಲದೆ ಈ ರೀತಿ ಬರೆದು ತಪ್ಪುದಾರಿಗೆ ಎಳೆದರೆ ನಿಮ್ಮ ವಿರುದ್ದ ಕೇಸ್ ದಾಖಲಿಸೋಣವೇ ಎಂದು ಡಿಸಿ ಸೆಲ್ವಮಣಿ ಕಟ್ಟಡದ ಮಾಲೀಕರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡು ತಕ್ಷಣ ಅಳಿಸಿ ಹಾಕುವಂತೆ ಸೂಚಿಸಿದರು.
ನಗರದ ಗಂಗಮ್ಮ ದೇವಾಲಯ, ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಕಟ್ಟಡ ಸೇರಿದಂತೆ ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ, ಕೋರ್ಟ್ನಿಂದ ಕೇಸ್ ವಾಪಸ್ಸು ಪಡೆದು ಸಹಕರಿಸಿದಲ್ಲಿ ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರ ಸೊಣ್ಣೆಗೌಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ರಸ್ತೆ ಅಭಿವೃದ್ಧಿ ನಡೆಯಬೇಕು, ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದು, ಇರುವ ಕಟ್ಟಡದ ಜಾಗ ಬಿಟ್ಟುಕೊಡುತ್ತೇವೆ, ಕಡೆ ವ್ಯವಸ್ಥೆಗೆ ಕೋರಿದರೆ ಪರಿಗಣಿಸಬಹುದು. ಅದು ಬಿಟ್ಟು ಹೀಗೆಯೇ ಇರಲಿ ಎಂದರೆ ಎಲ್ಲರಿಗೂ ತೊಂದರೆ ಅಲ್ಲವೇ ಎಂದು ಪ್ರಶ್ನಿಸಿದರು.
ಹೈ ಕೋರ್ಟ್ ಮೆಟ್ಟಿಲೇರಿದವರು ನೀವು, ನೀವೇ ಕೇಸ್ ವಾಪಸ್ ಪಡೆಯಿರಿ, ಕೇಸು ವಾಪಸ್ ಯಾವಾಗ ಬೇಕಾದರೂ ಪಡೆಯಬಹುದು, ದೇವಸ್ಥಾನ ಆಡಳಿತ ಮಂಡಳಿ ಸಮಿತಿಯವರು ಕುಳಿತು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದರು.
ಕೇಸ್ ವಾಪಸ್ ಪಡೆದು ಸಹಕಾರ ನೀಡಿ, ಇಲ್ಲದಿದ್ದರೆ ವಾರದಲ್ಲಿ ಕೋರ್ಟ್ನಿಂದ ತಡೆಯಾಜ್ಞೆ ತೆರವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಕಿಶೋರ್ ಬಾಬು, ನಗರಸಭೆ ಸದಸ್ಯ ರಾಕೇಶ್ ಇತರರು ಹಾಜರಿದ್ದರು.