ಇಂದೋರ್‌ನಲ್ಲಿ ರೋಹಿತ್- ಗಿಲ್ ಅಬ್ಬರ: ಶತಕ ಸಿಡಿಸಿ ಸಂಭ್ರಮಿಸಿದ ಓಪನರ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್ ಸಿಡಿಲಬ್ಬರದ ಶತಕವನ್ನು ಸಿಡಿಸಿದರು.
ಓಪನ್ ಆಗಿ ಇಳಿದ ಈ ಜೋಡಿ ಕಿವೀಸ್ ಬೌಲರ್ ಗಳನ್ನೂ ಬೆನ್ನಟ್ಟಿದರು.

ಇಂದೋರ್‌ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆದಿದೆ. ಟೀಂ ಇಂಡಿಯಾ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು.ಶುಭ್‌ಮನ್‌ ಗಿಲ್‌ ಹಾಗೂ ರೋಹಿತ್ ಶರ್ಮಾ ಜೋಡಿ ಮೂರನೇ ಬಾರಿಗೆ ಮೂರಂಕಿ ಮೊತ್ತದ ಜತೆಯಾಟವಾಡುವಲ್ಲಿ ಯಶಸ್ವಿಯಾದರು.

ಬರೋಬ್ಬರಿ 80 ಇನಿಂಗ್ಸ್‌ಗಳ ಬಳಿಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಇದು ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ 30ನೇ ಏಕದಿನ ಶತಕವಾಗಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜತೆ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡುಲ್ಕರ್(49) ಹಾಗೂ ವಿರಾಟ್ ಕೊಹ್ಲಿ(46*) ರೋಹಿತ್ ಶರ್ಮಾ ಅವರಿಗಿಂತ ಮುಂದಿದ್ದಾರೆ. ರೋಹಿತ್ ಶರ್ಮಾ 85 ಎಸೆತಗಳನ್ನು ಎದುರಿಸಿ 101 ರನ್ ಬಾರಿಸಿ ಬ್ರಾಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು.

ಗಿಲ್‌ಗೆ ಮತ್ತೊಂದು ಶತಕ
ಶುಭ್‌ಮನ್‌ ಗಿಲ್‌ ಕೂಡಾ ಮತ್ತೊಮ್ಮೆ ಆಕರ್ಷಕ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಗಿಲ್ ಕಳೆದ 4 ಏಕದಿನ ಇನಿಂಗ್ಸ್‌ನಲ್ಲಿ 3ನೇ ಶತಕ ಇದಾಗಿದೆ. ಶುಭ್‌ಮನ್ ಗಿಲ್‌ ಕೇವಲ 72 ಎಸೆತಗಳನ್ನು ಎದುರಿಸಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಗಿಲ್‌ 78 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!