ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮನೆ ಸಂಪೂರ್ಣ ಹಾನಿಯಾದವರಿಗೆ ಕೂಡಲೇ 5 ಲಕ್ಷ ರೂ. ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಅವರಿಗೆ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಸೂಚಿಸಿದರು.
ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ, ಈ ಬಾರಿ ವಾಡಿಕೆಯಷ್ಟು ಮುಂಗಾರು ಸುರಿದಿಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ ವಾಡಿಕೆಗಿಂತ ಶೇ.21 ರಷ್ಟು ಮಳೆ ಜಾಸ್ತಿಯಾಗಿದ್ದು,ಜಿಲ್ಲೆಯಲ್ಲಿ ಮಳೆ ಜೋರಾಗಿ ಸುರಿದಾಗ ಬರಲು ನನಗೆ ಸಾಧ್ಯವಾಗಿರಲಿಲ್ಲ. ಆಗ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದರು. ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.