ಆಂಗ್ಲೋ-ಮಣಿಪುರಿ ಯುದ್ಧ ವೀರರ ವಂಶಸ್ಥರನ್ನು ಗೌರವಿಸಿದ ಆರ್‌ಎಸ್‌ಎಸ್ ಸರಸಂಘಚಾಲಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಫಾಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ಇಂಫಾಲ ಪೂರ್ವದ ಹರವೂರು ರಾಜರ್ಷಿ ಭಾಗ್ಯಚಂದ್ರ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ (ಆರ್‌ಬಿಎಸ್‌ಡಿಸಿ) ಜರಗಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಂಗ್ಲೋ-ಮಣಿಪುರಿ ಯುದ್ಧ ವೀರರ ವಂಶಸ್ಥರನ್ನು ಗೌರವಿಸಿದರು.

ಈ ವೇಳೆ ಮಾತನಾಡಿದ ಡಾ. ಭಾಗವತ್, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಅವರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿವೆ. ಅನೇಕ ಮಣಿಪುರಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ ಮತ್ತು ಅವರಲ್ಲಿ ಕೆಲವರಿಗೆ ಮರಣದಂಡನೆ ವಿಧಿಸಲಾಯಿತು. ಮಣಿಪುರದ ಮಹಾರಾಜ ಕುಲಚಂದ್ರ ಸಿಂಗ್ ಅವರನ್ನು 22 ಮಂದಿಯೊಂದಿಗೆ ಕಾಲಾಪಾನಿಗೆ ಕಳುಹಿಸಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇತರ ರಾಜ್ಯಗಳು ನೀಡಿದ ಕೊಡುಗೆಯನ್ನು ಮಣಿಪುರದ ಜನರು ಸಹ ನೀಡಿದ್ದಾರೆ. ಇದನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.

ಭಾರತವು ಧರ್ಮದ ಮೇಲೆ ನಿಂತಿಲ್ಲ, ಆದರೆ ಧರ್ಮವನ್ನು ಆಧರಿಸಿದೆ; ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಡಿಲ್ಲ, ಧರ್ಮಕ್ಕಾಗಿಯೂ ಹೋರಾಡಿದರು. ನಮ್ಮ ಪೂರ್ವಜರ ತ್ಯಾಗ ಮನೋಭಾವ ನಮ್ಮ ರಕ್ತದಲ್ಲಿದೆ ಮತ್ತು ಅವರ ಕೊಡುಗೆ ಇಡೀ ದೇಶವನ್ನು ಬಲಿಷ್ಠಗೊಳಿಸುತ್ತದೆ. ಭಾರತವನ್ನು ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧ ರಾಷ್ಟ್ರವನ್ನಾಗಿ ಮಾಡುವುದು ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ. ಆದರೆ, ವಿಶ್ವಗುರುವಾಗಿ ಜಗತ್ತನ್ನು ಮುನ್ನಡೆಸಲು ನಾವು ನಮ್ಮ ಕಾರ್ಯತಂತ್ರವನ್ನು ಬದಲಾಯಿಸಬೇಕಾಗಿದೆ ಎಂದು ಡಾ. ಮೋಹನ್ ಭಾಗವತ್ ತಿಳಿಸಿದರು.

ಮಹಾಭಾರತದ ಕಾಲದಿಂದಲೂ ಮಣಿಪುರ ಭಾರತದ ಜೀವನಕ್ಕೆ ಕೊಡುಗೆ ನೀಡಿದೆ. ಇಂದಿನ ಪೀಳಿಗೆ ಕೂಡ ಆ ವೀರರನ್ನು ಪ್ರೇರೇಪಿಸುವ ಮೂಲಕ ಅದೇ ಕೊಡುಗೆಯನ್ನು ನೀಡುತ್ತದೆ. ನಮ್ಮ ಕಾರ್ಯಗಳ ಮೂಲಕ ನಾವು ಇಡೀ ಭಾರತದ ಉನ್ನತಿಯನ್ನು ಪಡೆಯಬೇಕು ಎಂದ ಮೋಹನ್ ಭಾಗವತ್ ಅವರು, ಪುಸ್ತಕವನ್ನು ಮಣಿಪುರಿ ಮತ್ತು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಒತ್ತಾಯಿಸಿದರು. ಇದರಿಂದ ಪ್ರತಿಯೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಮಣಿಪುರದ ಕೊಡುಗೆಯನ್ನು ಓದಿ ಅರ್ಥಮಾಡಿಕೊಳ್ಳಬಹುದು ಎಂದರು.

‘ಅನ್‌ಸಂಗ್ ಆಂಗ್ಲೋ-ಮಣಿಪುರಿ ವಾರ್ ಹೀರೋಸ್ ಅಟ್ ಕಾಲಾಪಾನಿ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಮತ್ತು ಮಣಿಪುರದ ಮಹಾರಾಜ್, ರಾಜ್ಯಸಭಾ ಸದಸ್ಯರೂ ಆಗಿರುವ ಲೀಶೆಂಬಾ ಸನಜಯೋಬಾ ಅವರು ಬಿಡುಗಡೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!