15ನೇ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಬಂದಾಕೆ 100ಕೋಟಿ ರೂ. ಉದ್ದಿಮೆ ಸ್ಥಾಪಿಸಿದ ಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಕೆ ಮನೆಬಿಟ್ಟು ಬರುವಾಗ ವಯಸ್ಸಿನ್ನೂ 15, ಅವಳ ಕೈಲಿದ್ದದ್ದು ಕೇವಲ 300 ರೂಪಾಯಿ. ಆದರೀಗ ಆಕೆ ನೂರುಕೋಟಿ ರೂಪಾಯಿ ಮೌಲ್ಯದ ಕಂಪನಿಯ ಒಡತಿ… ಈ ಉದ್ದಿಮೆ ಕಟ್ಟಿದ್ದರ ಹಿಂದಿರುವ ಆಕೆಯ ಪರಿಶ್ರಮ ಎಂಥವರಿಗೂ ಸ್ಫೂರ್ತಿದಾಯಕವಾದದ್ದು. ನವೋದ್ದಿಮೆಗಳನ್ನು ಪ್ರೋತ್ಸಾಹಿಸುವ ಶಾರ್ಕ್‌ ಟ್ಯಾಂಕ್‌ ಇಂಡಿಯಾದ ಎರಡನೇ ಅವೃತ್ತಿ ಬಹಳಷ್ಟು ಸದ್ದು ಮಾಡುತ್ತಿದೆ. ದೇಶದ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವುದರ ಜೊತೆಗೆ ಇಂಥಹ ಪರಿಶ್ರಮವನ್ನು ಅನಾವರಣಗೊಳಿಸುತ್ತಿದೆ. ಇತ್ತೀಚೆಗೆ ಶಾರ್ಕ್‌ ಟ್ಯಾಂಕ್‌ ಕಾರ್ಯಕ್ರಮದ ವೇದಿಕೆ ಹತ್ತಿದ ಈ ಮಹಿಳೆಯ ಕಥೆಯನ್ನು ಕೇಳಿದ ಶಾರ್ಕ್‌ ಗಳು ಆಕೆಯ ಪರಿಶ್ರಮಕ್ಕೆ ತಲೆಬಾಗಿದ್ದಾರೆ.

ಆಕೆಯ ಹೆಸರು ಚಿನು ಕಾಲಾ, 15ನೇ ವಯಸ್ಸಿನಲ್ಲಿಯೇ ತಂದೆ ಹಾಗು ಮಲತಾಯಿಯ ನಡುವಿನ ಜಗಳದಲ್ಲಿ ಬೇಸತ್ತು ಮನೆಬಿಟ್ಟು ಹೊರಡುವ ಕಠಿಣ ನಿರ್ಧಾರ ಮಾಡಿದ್ದಳು. ಆಗ ಆಕೆಯಿನ್ನೂ 7 ನೇ ತರಗತಿಯಲ್ಲಿ ಓದುತ್ತಿದ್ದ ಮುದ್ದು ಮೊಗದ ಹುಡುಗಿ, ಆಕೆಯ ತಾಯಿ ಆ ಸಂದರ್ಭದಲ್ಲಿ ಅವಳಿಂದ ಬಹುದೂರದ ಸೌದಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಮನೆಯಲ್ಲಿನ ವಾತಾವರಣದಿಂದ ರೋಸಿಹೋಗಿದ್ದ ಆಕೆಗೆ ತನ್ನ ತಾಯಿಯನ್ನೂ ಸಂಪರ್ಕಿಸಬೇಕೆಂದು ಅನ್ನಿಸಲೇ ಇಲ್ಲ, ತನ್ನ ಬಳಿಯಿರುವ 300 ರೂಪಾಯಿ ಉಳಿತಾಯವನ್ನಿಟ್ಟುಕೊಂಡು ಹೀಗೆ ಮನೆ ಬಿಟ್ಟು ಹೊರಟ ಆಕೆ ಮುಂಬೈ ನಗರ ತಲುಪಿದ್ದಳು. ಕೇವಲ 7ನೇ ತರಗತಿ ಓದಿದ್ದ ಆಕೆಯ ಶೈಕ್ಷಣಿಕ ಅರ್ಹತೆಯಿಂದಾಗಿ ತಕ್ಷಣಕ್ಕೇ ಉದ್ಯೋಗ ಸಿಗಲಿಲ್ಲ. ಎರಡು ದಿನ ಮುಂಬೈ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿಯೇ ಕಳೆದ ಆಕೆಗೆ ಮಹಿಳೆಯೊಬ್ಬರು ಪರಿಚಯವಾದರು, ಮನೆಯ ಬಾಗಿಲಿಗೆ ಹೋಗಿ ಮಾರಾಟ ಮಾಡುವ ಸೇಲ್ಸ್‌ ಗರ್ಲ್‌ ಉದ್ಯೋಗದ ಕುರಿತು ಆಕೆ ಮಾಹಿತಿ ನೀಡಿದರು, ಇಲ್ಲಿ ಪ್ರತಿ ಮಾರಾಟದ ಮೇಲೆ ಇಂತಿಷ್ಟು ಎಂದು ಆಕೆಗೆ ಕಮೀಷನ್‌ ಸಿಗುತ್ತಿತ್ತೇ ಬಿಟ್ಟರೆ ನಿರ್ದಿಷ್ಟ ಸಂಬಳ ಅಂತ ಇರಲಿಲ್ಲ. ಸರಿಯೆಂದು ಅದನ್ನೇ ಮಾಡಲು ನಿರ್ಧರಿಸಿದ್ದಳು ಕಾಲಾ.

ಮಲಗಲು ಹಾಸಿಗೆಯೊಂದಕ್ಕೆ ದಿನಕ್ಕೆ 25 ರೂಪಾಯಿ ಶುಲ್ಕವಿಧಿಸುವ ನಿಲಯವೊಂದರಲ್ಲಿ ವಾಸ್ತವ್ಯ ಮಾಡಿದ ಆಕೆ ಮನೆಬಾಗಿಲಿಗೆ ಸೇಲ್ಸ್‌ ಗರ್ಲ್‌ ಆಗಿ ಹೊರಟಿದ್ದಳು. ಮೊದಲ ದಿನದ ಮೊದಲ ಮಾರಾಟ ಮಾಡುವ ಹುಮ್ಮಸ್ಸಿನಲ್ಲಿದ್ದ ಆಕೆ ಮನೆಯೊಂದರ ಬಾಗಿಲು ಬಡಿದಾಗ ಮನೆಯೊಡತಿ ಈಕೆಯನ್ನು ನೋಡಿ ತೊಲಗು ಇಲ್ಲಿಂದ ಎಂದು ಹೇಳುತ್ತಾ ಬಾಗಿಲು ಮುಚ್ಚಿದರಂತೆ. ಮೊದಲ ಮಾರಾಟವೇ ಹೀಗಾಯಿತಲ್ಲ ಎಂದು ಕಟ್ಟಡವೊಂದರ ನೆಲಮಹಡಿಯಲ್ಲಿ ನಿಂತು ಗಂಟೆಗಟ್ಟಲೇ ಅತ್ತಿದ್ದನ್ನು ನೆನಪಿಸಿ ಕೊಳ್ಳುತ್ತಾರೆ ಚಿನು ಕಾಲಾ… ಆ ಸಂದರ್ಭದಲ್ಲಿ ಮನಸ್ಸನ್ನು ಹತಾಶೆ ಆವರಿಸಿತಾದರೂ ಸೋಲೊಪ್ಪಿ ಮನೆಗೆ ವಾಪಸ್ಸಾಗಲು ಮನಸ್ಸಾಗಲಿಲ್ಲ, ಮತ್ತೆ ದೃಢ ನಿರ್ಧಾರ ಮಾಡಿದ ಆಕೆ ಮಾರಾಟ ಮುಂದುವರಿಸಿದರು. ಅಲೆದೂ ಅಲೆದೂ ಕೊನೆಗೂ ಮೂರು ಮಾರಾಟವನ್ನು ಯಶಸ್ವಿಯಾಗಿಸಿದ ಆಕೆ ದಿನದ ಅಂತ್ಯದಲ್ಲಿ 60 ರೂ. ಗಳಿಸಿದ್ದಳು. ಅಲ್ಲಿಂದ ಆಕೆಯೆ ಪ್ರಯಾಣ ಆರಂಭವಾಗಿತ್ತು. ಹೀಗೆ 6-7 ತಿಂಗಳು ಕೆಲಸ ಮಾಡುವಷ್ಟರಲ್ಲಿ ಆಕೆಯ ಕೆಳಗೆ 3 ಜನ ಇತರ ಹುಡುಗಿಯರು ಕೆಲಸ ಮಾಡಲು ಆರಂಭಿಸಿದ್ದರು. ಆಗ ಆಕೆಯ ವಯಸ್ಸು ಕೇವಲ 16.

ಸೇಲ್ಸ್‌ ಗರ್ಲ್‌ ಉದ್ಯೋಗದ ನಂತರ ಸೂರತ್‌ ನಲ್ಲಿ ಇನ್ನೊಂದು ಉದ್ಯೋಗ ಮಾಡಿ ಕೊನೆಗೆ ಟಾಟಾ ಇಂಡಿಕಾಂ ನಲ್ಲಿ ಕಸ್ಟಮರ್‌ ಕೇರ್‌ ಎಕ್ಸೆಕ್ಯೂಟಿವ್‌ ಆಗಿ ಉದ್ಯೋಗ ಆರಂಭಿಸಿದರು. ಅಲ್ಲಿ ಆಕೆಗೆ ಪ್ರಸ್ತುತ ಅವರ ಪತಿಯಾಗಿರೋ ಅಮಿತ್‌ ಕಾಲಾ ಪರಿಚಯವಾಗಿತ್ತು. ವಿವಾಹದ ನಂತರ ಬ್ಯೂಟಿಷಿಯನ್‌ ಕೋರ್ಸ್‌ ಕಲಿತು ಮನೆಯಲ್ಲಿಯೇ ಬ್ಯೂಟಿ ಪಾರ್ಲರ್‌ ಆರಂಭಿಸಿದರು. ನಂತರದಲ್ಲಿ ಗ್ಲಾಡ್ರಾಗ್ಸ್ ಮಿಸೆಸ್ ಇಂಡಿಯಾ ಬಗ್ಗೆ ತಿಳಿದು ಅದರಲ್ಲಿ ಭಾಗವಹಿಸಿದ್ದ ಆಕೆ ಜಯಶಾಲಿಯಾಗದಿದ್ದರೂ ಟಾಪ್‌10 ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದರು. ಹೀಗೆ ಫ್ಯಾಷನ್‌ ಕ್ಷೇತ್ರದ ಬಗ್ಗೆ ತಿಳಿದುಕೊಂಡ ಆಕೆಗೆ ಸೌಂದರ್ಯ ಕ್ಷೇತ್ರದಲ್ಲಿ ಆಭರಣಗಳಿಗಿರುವ ಪ್ರಾಮುಖ್ಯತೆ ಅರಿವಾಗಿತ್ತು. ಅಲ್ಲಿಂದ ಆಕೆ ಆರ್ಟಿಫಿಷಿಯಲ್‌ ಆಭರಣಗಳನ್ನು ತಯಾರಿಸುವ ಕುರಿತು ಚಿಂತಿಸಲು ಆರಂಭಿಸಿದರು.

ಅಂತಿಮವಾಗಿ 2014 ರಲ್ಲಿ ʼರೂಬನ್ಸ್ ಆಕ್ಸೆಸರೀಸ್ʼ ಎಂಬ ಉದ್ದಿಮೆ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ಆರ್ಟಿಫಿಷಿಯಲ್‌ ಅಭರಣ ತಯಾರಿಕೆಯಲ್ಲಿ ಅವರ ಈ ಕಂಪನಿ ಮುಂಚೂಣಿಯಲ್ಲಿದೆ. 2021ರಲ್ಲಿ 29.7 ಕೋಟಿ ರೂ. ಮತ್ತು 2022ರಲ್ಲಿ 51 ಕೋಟಿ ರೂ. ಮೌಲ್ಯದ ಮಾರಾಟವನ್ನು ಕಂಪನಿ ದಾಖಲಿಸಿದೆ. ಇಲ್ಲಿಯವರೆಗೆ ಒಟ್ಟಾರೆ 297ಕೋಟಿ ರೂಪಾಯಿಗೂ ಅಧಿಕ ಮಾರಾಟವನ್ನು ಮಾಡಲಾಗಿದೆ. ಇ-ಕಾಮರ್ಸ್‌ ಪ್ಲಾಟ್‌ ಫಾರ್ಮ್‌ ಮಿಂತ್ರಾ.ಕಾಂ ನಲ್ಲಿ ಮೂರು ವರ್ಷಗಳಿಂದ ಅತಿ ಹೆಚ್ಚು ಮಾರಾಟವಾದ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಇವರ ಕಂಪನಿ ಪಾತ್ರವಾಗಿದೆ. ಈಗ ಆಕೆಯ ಪತಿ ಕೂಡ ಅವರದೇ ಕಂಪನಿಯ ಏಳ್ಗೆಗೆ ಶ್ರಮಿಸುತ್ತಿದ್ದಾರೆ.

ಆಕೆಯ ಈ ಕತೆಯನ್ನು ಕೇಳಿದ ಶಾರ್ಕ್‌ ಗಳು “ನಾವು ಮಾಸ್ಟರ್ಸ ನಂತಹ ಉನ್ನತ ಶಿಕ್ಷಣದಲ್ಲಿ ಕಲಿತ ವಿಷಯಗಳನ್ನು ನೀವು ನಿಮ್ಮ ಬದುಕಿನಲ್ಲಿಯೇ ಕಲಿತಿದ್ದೀರಿ” ಎಂದು ಉದ್ಗರಿಸಿದ್ದಾರೆ. ಶಾರ್ಕ್‌ ನಮಿತಾ ಥಾಪರ್‌ ಹಾಗು ಶಾರ್ಕ್‌ ವಿನೀತಾ ಸಿಂಗ್‌ ಈ ಕಂಪನಿಯಲ್ಲಿ 1.5 ಕೋಟಿ ಹೂಡಿಕೆಯನ್ನೂ ಮಾಡಿದ್ದಾರೆ. ಹೀಗೆ 15ನೇ ವಯಸ್ಸಿನಲ್ಲಿಯೇ ಮನೆಬಿಟ್ಟು ನೂರಾರು ಕೋಟಿ ಬೆಲೆಬಾಳುವ ಕಂಪನಿ ಸ್ಥಾಪಿಸಿದ ಚಿನು ಕಾಲಾ ಅದೆಷ್ಟೋ ಉದ್ಯೋಗಿಗಳಿಗೆ ಮಾದರಿಯಾಗಿ ನಿಲ್ಲುತ್ತಾರೆ. ಕಠಿಣ ಪರಿಶ್ರಮ ಯಶಸ್ಸು ಸಾಧಿಸುವಂತೆ ಮಾಡುತ್ತದೆ ಎಂಬುದಕ್ಕೆ ಚಿನು ಕಾಲಾ ಬದುಕೇ ದೊಡ್ಡ ಉದಾಹರಣೆಯಾಗಿ ಗೋಚರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!