ಮೋದಿಯವರ ಹೇಳಿಕೆಯನ್ನು ಪಾಶ್ಚಿಮಾತ್ಯರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇದು ಯುದ್ಧದ ಸಮಯವಲ್ಲ ಎಂಬ ಮೋದಿಯವರ ಹೇಳಿಕೆಯನ್ನು ಪಾಶ್ಚಿಮಾತ್ಯರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಭಾರತಕ್ಕೆ ರಷ್ಯಾದ ರಾಯಭಾರಿ ಡೆನಿಸ್‌ ಅಲಿಪೋವ್‌ ಹೇಳಿದ್ದಾರೆ. ಜಿ-7 ರಾಷ್ಟ್ರಗಳು ರಷ್ಯಾದ ಆದಾಯವನ್ನು ಮಿತಿಗೊಳಿಸಲು ಯತ್ನಿಸುತ್ತಿರುವ ಕುರಿತು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುವ ವೇಳೆ ಅವರು ಈ ಉಲ್ಲೇಖಗಳನ್ನು ಮಾಡಿದ್ದಾರೆ.

ಜಿ-7 ದೇಶಗಳು ಪ್ರಸ್ತಾಪಿಸಿರುವ ಬೆಲೆ ಮಿತಿ ನ್ಯಾಯಯುತವಾಗಿಲ್ಲದಿದ್ದರೆ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆಯನ್ನು ನಿಲ್ಲಿಸುವುದಾಗಿ ಹೇಳಿದ ಅವರು “ಬೆಲೆಗಳು ನ್ಯಾಯಯುತವಾಗಿಲ್ಲ ಮತ್ತು ನಮಗೆ ಸ್ವೀಕಾರಾರ್ಹವಲ್ಲ ಎಂದು ನಾವು ಪರಿಗಣಿಸಿದರೆ, ನಾವು ಜಾಗತಿಕ ಮಾರುಕಟ್ಟೆಗಳಿಗೆ ಮತ್ತು ಬೆಲೆ ಮಿತಿಯಲ್ಲಿ ಯುಎಸ್ ಉಪಕ್ರಮಕ್ಕೆ ಸೇರುವ ದೇಶಗಳಿಗೆ ತೈಲ ಪೂರೈಕೆಯನ್ನು ನಿಲ್ಲಿಸುತ್ತೇವೆ” ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ರಷ್ಯಾ ತನ್ನ ವ್ಯಾಪಾರ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಯಾವುದೇ ಕಾರ್ಯವಿಧಾನವನ್ನು ಅನುಸರಿಸುವುದಿಲ್ಲ ಎಂದ ಅವರು “G-7 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವು ಕ್ರೆಮ್ಲಿನ್‌ನ ಆದಾಯವನ್ನು ಮಿತಿಗೊಳಿಸಲು ರಷ್ಯಾದ ಕಚ್ಚಾ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಮೇಲೆ ತೈಲ ಬೆಲೆ ಮಿತಿಯನ್ನು ವಿಧಿಸಿದೆ. ಈ ತಿಂಗಳ ಆರಂಭದಲ್ಲಿ, G-7 ಹಣಕಾಸು ಮಂತ್ರಿಗಳು ನೀಡಿದ ಹೇಳಿಕೆಯು ಬೆಲೆಯ ಮಿತಿಯನ್ನು ನಿರ್ದಿಷ್ಟವಾಗಿ ರಷ್ಯಾದ ಆದಾಯವನ್ನು ಕಡಿಮೆ ಮಾಡಲು ಮತ್ತು ಉಕ್ರೇನ್ ಯುದ್ಧಕ್ಕೆ ನಿಧಿಯ ಸಾಮರ್ಥ್ಯವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದ್ದಾರೆ.

ಈ ಬೆಲೆ ಮಿತಿಯು ಜಾಗತಿಕ ಮಾರುಕಟ್ಟೆಗಳಲ್ಲಿ ತೈಲದ ತೀವ್ರ ಕೊರತೆಗೆ ಕಾರಣವಾಗುತ್ತದೆ ಮತ್ತು ಬೆಲೆ ತೀವ್ರವಾಗಿ ಏರುತ್ತದೆ ಎಂದು ಅಲಿಪೋವ್ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮರಿಕವು ರಷ್ಯಾದ ಬೆಲೆಯನ್ನು ಮಿತಿಗೊಗೊಳಿಸಲು ಒಕ್ಕೂಟವನ್ನು ಸೇರುವಂತೆ ಒತ್ತಾಯಿಸಿದೆ. ಆದರೆ ಭಾರತವು ಈ ಪ್ರಸ್ತಾವನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದಾಗಿ ಹೇಳಿದೆ.

ಈ ವೇಳೆ ಪ್ರಧಾನಿ ಮೋದಿಯವರು ರಷ್ಯಾದ ಅಧ್ಯಕ್ಷ ಪುಟಿನ್‌ ಅವರಿಗೆ ಇದು ಯುದ್ಧದ ಸಮಯವಲ್ಲ ಎಂದು ಹೇಳಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಲಿಪೋವ್‌ ಭಾರತದ ಹೇಳಿಕೆಯು ಅದರ ನಿಲುವಿಗೆ ಸ್ಥಿರವಾಗಿದೆ. ಆದರೆ ಪಶ್ಚಿಮವು ಇತರ ಭಾಗಗಳನ್ನು ನಿರ್ಲಕ್ಷಿಸಿ ಅವರಿಗೆ ಸೂಕ್ತವಾದ ಉಲ್ಲೇಖಗಳನ್ನು ಮಾತ್ರ ಬಳಸುತ್ತದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!