ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಪಾಶ್ಚಾತ್ಯ ದೇಶಗಳ ವಿರುದ್ಧ ಕಿಡಿಕಾರಿರುವ ರಷ್ಯಾ, ಮೂರನೇ ವಿಶ್ವ ಸಮರ ಪ್ರಾರಂಭಿಸುವ ಎಚ್ಚರಿಕೆ ನೀಡಿದೆ.
ಸಂಘರ್ಷ ಪೀಡಿತ ಉಕ್ರೇನ್‌ ರಷ್ಯಾದೊಂದಿಗೆ ಹೋರಾಟ ನಡೆಸಲು ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಮಂಗಳವಾರ (ಇಂದು) ಸಭೆ ನಡೆಯಲಿದೆ. ಈ ಸಭೆಗೂ ಮುನ್ನ ರಷ್ಯಾ ದೊಡ್ಡ ಮಟ್ಟದಲ್ಲಿ ಎಚ್ಚರಿಕೆಯನ್ನು ನೀಡಿದೆ.
ಈ ಬಗ್ಗೆ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗಾಯ್‌ ಲಾವ್ರೋಸ್‌, ಉಕ್ರೇನ್‌ ಗೆ ಪಾಶ್ಚಾತ್ಯ ದೇಶಗಳ ಬೆಂಬಲದ ಕಾರಣದಿಂದಾಗಿಯೇ ಶಾಂತಿ ಮಾತುಕತೆಗಳು ಮುರಿದು ಬೀಳುತ್ತಿದೆ. ಉಕ್ರೇನ್‌ ರಷ್ಯಾ ಸೇನೆಯ ವಿರುದ್ಧ ಹೋರಾಡಲು ದೊಡ್ಡಮಟ್ಟದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದನ್ನು ರಷ್ಯಾ ಗಮನಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವೆರೆದರೆ ವಿಶ್ವದಲ್ಲಿ ಮೂರನೇ ಮಹಾಯುದ್ಧ ಸನ್ನಿಹಿತಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಶ್ಚಿಮಾತ್ಯ ಶಕ್ತಿಗಳು ಪರಮಾಣು-ಶಸ್ತ್ರಸಜ್ಜಿತ ರಷ್ಯಾದ ವಿರುದ್ಧ ನೇರವಾಗಿ ಸಂಘರ್ಷಕ್ಕಿಳಿಯಲು ಭಯಪಡುತ್ತಿವೆ. ಆದರೆ ಉಕ್ರೇನ್‌ ಗೆ ನೆರವು ನೀಡುವ ಮೂಲಕ ಪರೋಕ್ಷವಾಗಿ ಯುದ್ಧ ನಡೆಸುತ್ತಿವೆ. ನಮ್ಮ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಕ್ಷಿಪಣಿಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಸುಧಾರಿತ ಡ್ರೋನ್‌ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಮೂಲಕ ಪಾಶ್ಚಿಮಾತ್ಯ ಸಂಘರ್ಷವನ್ನು ಕೊನೆಗೊಳಿಸುವ ಬದಲು ಅದನ್ನು ವಿಸ್ತರಿಸುವ ಪ್ರಚೋದನಕಾರಿ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಲಾವ್ರೊವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಅಗತ್ಯ ಮಿಲಿಟರಿ ನೆರವನ್ನು ಕೇಳುತ್ತಿದ್ದಾರೆ. ಫಿರಂಗಿ, ಫೈಟರ್ ಜೆಟ್‌ಗಳು ಸೇರಿದಂತೆ ತಮಗೆ ಅತ್ಯಗತ್ಯ ಮಿಲಿಟರಿ ನೆರವು ಸಿಕ್ಕರೆ ಉಕ್ರೇನ್‌ ಪಡೆಗಳು ರಷ್ಯಾವನ್ನು ಮಣಿಸಲಿವೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಅಮೆರಿಕವು ಕಳೆದ ವಾರ ಉಕ್ರೇನ್‌ ಗೆ 53 ಸಾವಿರ ಕೋಟಿ ಮಿಲಿಟರಿ ನೆರವು ನೀಡುವ ಭರವಸೆ ನೀಡಿದೆ. ಉಕ್ರೇನ್‌ ಗೆ ಹೆಚ್ಚಿನ ಶಾಸ್ತ್ರಾಸ್ತ್ರಗಳನ್ನು ಪೂರೈಸುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಇಂದು ಅಮೆರಿಕ ನೇತೃತ್ವದಲ್ಲಿ 40 ಕ್ಕೂ ಹೆಚ್ಚಿನ ರಾಷ್ಟ್ರಗಳು ಜರ್ಮನಿಯಲ್ಲಿ ಭದ್ರತಾ ಶೃಂಗಸಭೆ ನಡೆಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!