ರಾಜಕೀಯ ನಿವೃತ್ತಿ ಇಲ್ಲ, ಹೇಳಿಕೆ ಹಿಂಪಡೆದ ಎಸ್. ಅಂಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆ ಅಭ್ಯರ್ಥಿ ಸ್ಥಾನ ಸಿಗದ ಕಾರಣ ನೋವಿನಿಂದ ಅಂದು ರಾಜಕೀಯ ನಿವೃತ್ತಿ ಹೇಳಿಕೆ ನೀಡಿದ್ದೇನೆ. ಆದರೆ ಬಳಿಕ ನನ್ನ ನಿರ್ಧಾರ ಬದಲಾಯಿಸಿದ್ದೇನೆ. ಮುಂದೆಯೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕವಾದ ಕೆಲಸ ಮಾಡುತ್ತೇನೆ ಎಂದು ಸಚಿವ ಎಸ್.ಅಂಗಾರ ಹೇಳಿದರು.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದರು‌. ರಾಜಕೀಯ ನಿವೃತ್ತಿ ಹೇಳಿಕೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.

7 ಬಾರಿ ಸ್ಪರ್ಧಿಸಿದಾಗಲೂ ನಾನೆಂದೂ ನನಗೆ ಟಿಕೆಟ್ ಕೊಡಿ ಎಂದು ಕೇಳಿಕೊಂಡವನಲ್ಲ. ಟಿಕೆಟ್ ಗಾಗಿ ಲಾಬಿ ಮಾಡಿದವನೂ ಅಲ್ಲ. ಇಷ್ಟು ಬಾರಿಯೂ ಪಕ್ಷವೇ ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ನನ್ನ ಸಾರ್ವಜನಿಕ ಜೀವನದಲ್ಲಿ ನಾನೆಂದೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದವನೂ ಅಲ್ಲ. ನನ್ನ ಜೀವನ ತೆರೆದ ಪುಸ್ತಕ ಯಾರು ಬೇಕಾದರೂ ಓದಬಹುದಿತ್ತು ಎಂದು ನುಡಿದರು.

ಈ ಬಾರಿಯೂ ನಾನು ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂಬ ಹೇಳಿಕೆಯನ್ನು ಕೊಟ್ಟಿದ್ದೆ. ಆದರೆ ಟಿಕೆಟ್‌ ಸಿಗದ ಕಾರಣ ಬೇಸರದಲ್ಲಿದ್ದೆ. ಹೀಗಾಗಿ ಏ.12 ರಂದು ಬೆಳಗ್ಗೆ ನಾನು ಗೊಂದಲದಿಂದ ನನ್ನ ನಿರ್ಧಾರವನ್ನು ಪ್ರಕಟ ಮಾಡಿದೆ ಎಂದು ಹೇಳಿದರು.

ಯಾರೇ ಆಗಲಿ ಒಬ್ಬ ಮನೆ ಕೆಲಸದವನನ್ನು ಇಡುವಾಗಲೂ ಗಡುವು ಹಾಕಿ ತಿಳಿಸುವ ವ್ಯವಸ್ಥೆ ಇದೆ. ಆದರೆ 36 ವರ್ಷ ತೊಡಗಿಸಿಕೊಂಡ ನನಗೆ ಪರಿಸ್ಥಿತಿಯ ಬಗ್ಗೆ ಏನೂ ತೋಚದಂತಾಯಿತು ಎಂದು ತಿಳಿಸಿದರು.

ರಾಜಕೀಯದಲ್ಲಿ ಇಲ್ಲದಿದ್ದರೂ ಸಮಾಜದ ಮಧ್ಯೆ ನನ್ನ ಕೆಲಸ, ಕರ್ತವ್ಯ ನಿಲ್ಲುವುದಿಲ್ಲ. ಚುನಾಯಿತನಾಗುವ ಮೊದಲೂ ಸಮಾಜದೊಂದಿಗಿದ್ದೆ, ಇನ್ನು ಮುಂದೆಯೂ ಸಮಾಜದ ಜೊತೆಗಿರುತ್ತೇನೆ. ಕ್ಷೇತ್ರದ ಜನ ಸಮಸ್ಯೆ ಹೊತ್ತು ನನ್ನ ಬಳಿ ಬಂದಾಗ ನನ್ನ ಸಹಾಯ ನೀಡಲು ಹಿಂದಿನಂತೆಯೇ ಬದ್ಧನಿದ್ದೇನೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ವಳಲಂಬೆ ಮತ್ತು ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!