ಒಂದು ಯಾತನೀಯ ಗರ್ಭಪಾತದ ಅನುಭವ. ಜ್ವಾಲಾಮುಖಿಯ ಒಡಲು, ಎದೆಯಲ್ಲಿ ಬೆಂಕಿಯ ಭುಗಿಲು, ಕಗ್ಗತ್ತಲ ರಾತ್ರಿಯಲ್ಲಿ ಜಲಪಾತವಾಗುವ ಕಂಗಳು, ಕಿಬ್ಬೊಡಲಿನಿಂದ ಉಕ್ಕುವ ನಿನ್ನ ನೆನಪುಗಳು. ಹೃದಯ ಒಡೆದಿತೆ ಅದೂ ಇಲ್ಲ. ಆದರೂ ಸಹಿಸಿಕೊಳ್ಳಲಾಗದ ಯಾತನೆ….
ಸೂರ್ಯ ಪಶ್ಚಿಮ ದಿಗಂತದಲ್ಲಿ ಅಸ್ತಂಗತನಾಗಿದ್ದ. ಮುಗಿಲು ರಕ್ತರಂಜಿತವಾಗಿತ್ತು. ಈಗಷ್ಟೇ ಅರಳಿರುವ ಕಾವ್ಯ ಪುಷ್ಪದಂತಿದ್ದ ಯವ್ವನದ ಸಾಯಂಕಾಲವದು. ತಣ್ಣಗೆ ಬೀಸುತ್ತಿದ್ದ ಗಾಳಿಗೆ ಹಾರುವ ಮುಂಗುರುಳನ್ನು ನನ್ನ ನೀಳ ಬೆರಳುಗಳಿಂದ ಸರಿಸುತ್ತ ನಿನ್ನ ಭುಜಕ್ಕೆ ತಲೆಯಾನಿಸಿ ಕೇಳಿದ್ದೆ ನೆನಪಿದೆಯಾ ನಿನಗೆ?
“ನನ್ನನ್ನು ಹೀಗೆ ಜೀವನದ ಕೊನೆಯ ಪುಟದವರೆಗೂ ಪ್ರೀತಿಸುವೆಯಾ’ ಎಂದು. ನೀನು ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದು ಕೊಂಡೆ. ಆಗ ನಿನ್ನ ಅಂಗೈಯಲ್ಲಿ ಅಕ್ಕರೆಯ ಬಿಸುಪಿತ್ತು. ಸಾವಿರ ಸಾಂತ್ವಾನದ ಪಲ್ಲವಿ ಇತ್ತು. ನನ್ನನೇ ನೋಡುತ್ತಿದ್ದ ನಿನ್ನ ತುಂಟ ಕಣ್ಣುಗಳಲ್ಲಿ ನೀರಿನ ನಾವೆ ತೇಲುತ್ತಿತ್ತು. ಅಷ್ಟೆ ಸಾಕಿತ್ತು ನನಗೆ! ನೀನು ಮಾತಾಗಿ ಉತ್ತರವಾಗುವ ಅವಶ್ಯಕತೆ ಇರಲಿಲ್ಲ. ಆ ಒಂದು ತಣ್ಣನೆಯ ನೋಟದಲ್ಲಿಯೇ ಎಲ್ಲ ಉತ್ತರಗಳಿತ್ತು. ನಿನ್ನ ಕಣ್ಣಿನಾಳದ ಗಾಢ ಪ್ರೀತಿಯನ್ನು ಹೇಳುತ್ತಿತ್ತು. ಅದಕ್ಕೆ ಕಣೋ ಆ ಕಣ್ಣುಗಳನ್ನು ನಾನು ಅಷ್ಟೊಂದು ಮುದ್ದಿಸುತ್ತಿದ್ದಿದ್ದು.
ನಿನ್ನ ಕಣ್ಣಿನಲ್ಲಿ ತುಂಬಾ ಡಿಫರೆಂಟಾದ ತುಂಟತನವಿದೆ. ಯಾರಾದರೂ ಬುದ್ಧಿವಂತರಿದ್ದರೆ ಬಿಡಸಲಿ ಎಂಬಂಥ ಒಗಟು ಸದಾ ಕಣ್ಣಲ್ಲಿದ್ದಂತಿರುತ್ತದೆ. ಆದರೆ ಅದು ಕಾಮಕ್ಕಾಗಿ ಕಾತರಿಸುವ ನೋಟವಲ್ಲ. ಅಲ್ಲೊಂದು ಆಹ್ವಾನವಿದೆ. ಅಂಗಲಾಚುವಿಕೆಯಲ್ಲ, ಅಪ್ಯಾಯಮಾನವೆನ್ನಿಸುವ ಅಂಹಕಾರವಿದೆ. ಅದಕ್ಕೆ ಕಣೋ ಆ ತುಂಟ ಕಣ್ಣುಗಳಿಗೆ ಅಭಿಮಾನದಿಂದ ಕೋಟಿ ಕೋಟಿ ಮುತ್ತುಗಳನ್ನು ಕೊಡುತ್ತಿದ್ದೆ.
ಆದರೆ ಈಗ ನೋಡು! ನಾನು ಅಷ್ಟೊಂದು ಪ್ರೀತಿ ಮಾಡಿದ್ದ ಆ ಕಣ್ಣುಗಳೇ ನನ್ನ ವ್ಯಕ್ತಿತ್ವವನ್ನು ಅನುಮಾನಿಸಿತು, ನಿನ್ನನ್ನು ನನ್ನಿಂದ ದೂರ ಕರೆದೊಯ್ಯಿತು. ನಿನ್ನ ಕಣ್ಣಿನಲ್ಲಿ ನನ್ನ ಭವಿಷ್ಯದ ಕಿರಣಗಳು ಪ್ರಜ್ವಲಿಸಬಹುದೆಂದು ನಂಬಿದ್ದೆ. ಸಾವಿರಾರು ಕನಸು ಕಂಡಿದ್ದೆ. ಆದರೆ ಎಲ್ಲ ಸ್ವಪ್ನಗಳೂ ಚದುರಿ ಹೋಯಿತು. ಈ ಚಂದದ ಮೋಸಕ್ಕೆ ಯಾವ ಹೆಸರಿಡಲಿ ನೀನೇ ಹೇಳು?
ವರ್ಷಗಳ ಹಿಂದೆ ಎಷ್ಟೊಂದು ಸುಂದರವಾಗಿತ್ತು ನಮ್ಮ ಪ್ರೀತಿ. ದಿನವೂ ಹುಟ್ಟುವ ಸೂರ್ಯ ಹೊಸ ಕನಸು ಹೊತ್ತು ತರುತ್ತಿದ್ದ. ನಮ್ಮ ಭಾವನೆ, ಕನಸು, ಸುಖ-ದು:ಖಗಳನ್ನು ದಿನದ ಒಂದು ಗಂಟೆ ಎದುರು ಬದುರು ಕುಳಿತು ಹಂಚಿಕೊಳ್ಳುತ್ತಿದ್ದೆವು. ಸಾಸಿವೆಯಷ್ಟು ಸಂಶಯ ಬಂದರೂ ಬಗೆ ಹರಿಸಿಕೊಳ್ಳುತ್ತಿದ್ದೆವು. ನಿನ್ನಿಂದ ದಿನವೂ ಹೊಸ ಹೊಸ ಕನಸು ತುಂಬಿದ ಪ್ರೇಮ ಪತ್ರ. ಅಲ್ಲಿ ಪ್ರತಿ ಅಕ್ಷರವೂ ಉಸಿರಾಡುತ್ತಿತ್ತು. ಪ್ರೀತಿಯ ತೊರೆಯಾಗಿ ನೀನು ಹರಿಯಬೇಕು. ಶಿಶಿರ ಸಮುದ್ರವಾಗಿ ನಿಂತು ನಾನು ಸ್ವೀಕರಿಸಬೇಕೆಂಬ ಹೊಂದಾಣಿಕೆ. ಪ್ರೀತಿಯಲ್ಲಿ ಸೋಲೆಕೆ ಸರ್ವನಾಶವೂ ಮಧುರವೆಂಬಂತೆ ಮಾಡಿದವನು ನೀನು. ಆದರೆ ಈಗ ಹೃದಯಗಳ ಮಧ್ಯೆ ಕಂದಕವನ್ನೇ ನಿರ್ಮಾಣ ಮಾಡಿರುವೆ. ಬೆಳದಿಂಗಳಂತ ನನ್ನ ಪ್ರೀತಿಯನ್ನು ಅನುಮಾನಿಸಿ ಹೊರಟು ಹೋಗಿರುವೆ.
ನಾನು ನಿನ್ನಂದ ಬಯಸಿದ್ದು ಕಾಮವಿರದ ಸಾಮಿಪ್ಯ, ಅವಸರವಿಲ್ಲದ ಅಪ್ಪುಗೆ, ಬೆಳದಿಂಗಳಂತಹ ಪ್ರೇಮ ಮಾತ್ರ. ಹಣ, ಅಂದ-ಚಂದ ಯಾವುದೂ ನನಗೆ ಬೇಕಾಗಿರಲಿಲ್ಲ. ನಿನ್ನೊಲವಿಗಾಗಿ ಹಂಬಲಿಸಿದ ತುಂತುರು ಇಬ್ಬನಿ ಕಣೋ ನಾನು. ಮನ ಬಯಸಿದ್ದು ನಿನ್ನ ಪಿಸುಮಾತುಗಳಿಗೆ, ಒಲವೆಂಬ ಉಡುಗೊರೆಗೆ, ಅಂತರಂಗದ ಅಂತರವನ್ನು ದೂರ ಮಾಡಬಯಸುವ ಏಕಾಂತತೆಗೆ. ನಿನ್ನ ಕಣ್ಣ ನೋಟವನ್ನು ತುಂಬಾ ನಂಬಿದ್ದೆ. ಅದೇ ಕಣ್ಣೇ ಮೋಸ ಮಾಡಿದ ಮೇಲೆ ಬದುಕುವ ತಾಕತ್ತಾದರೂ ಎಲ್ಲಿಹುದು? ನಶ್ವರಗಳ ನಡುವೆ ಒಂಟಿ ಬಾಳಪಣವಿಂದು.
ಪ್ರೀತಿ ಯಾಕೆ ಇಷ್ಟೊಂದು ವಿಚಿತ್ರ. ಅದು ಸಣ್ಣದೊಂದು ನಂಬಿಕೆಯ ನಡುಗಡ್ಡೆಯ ಮೇಲೆ ಕಾಲೂರಿಕೊಂಡು ಬೆಳೆದು ನಿಲ್ಲುತ್ತದೆ. ಅಪನಂಬಿಕೆಯ ಅತಿ ಸಣ್ಣ ಅಲೆ ಬೀಸಿದರೂ ಮುಗಿಯಿತು. ನಡುಗಡ್ಡೆ ನಾಶವಾಗುತ್ತದೆ. ಇನ್ನೂ ನಿನಗಾಗಿ ಕಾಯುವುದರಲ್ಲಿ ಅರ್ಥವಿಲ್ಲ. ಆದರೂ ಒಂದು ವಿನಂತಿ, ‘ಪ್ರೀತಿ ಕರಗಿ ನೀರಾಗುವ ಮುನ್ನ, ಅಪನಂಬಿಕೆ ಗಡಿ ದಾಟುವ ಮುನ್ನ ಹೇಳಿ ಹೋಗು ಕಾರಣ’..
- ಕಾವ್ಯಾ ಜಕ್ಕೊಳ್ಳಿ