ಸಾದರಮಂಗಲ ಕೆಐಎಡಿಬಿ ಭೂ ವ್ಯವಹಾರದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ: ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬೆಂಗಳೂರು: ನಗರದ ವೈಟ್ ಫಿಲ್ಡ್ ಸಮೀಪವಿರುವ ಸಾದರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಹಂಚಿಕೆ ಮಾಡಲಾದ ಭೂಮಿಯಲ್ಲಿ ಅವ್ಯವಹಾರ ನಡೆದಿದೆಯೇ ಎಂಬುದರ ಕುರಿತು ತನಿಳೆ ನಡೆಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸುವುದಾಗಿ ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಬುಧವಾರ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಈ ಕುರಿತು ಪ್ರಶ್ನೆ ಎತ್ತಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, 1972ರಲ್ಲಿ ಕಾಡುಗೋಡಿಯಲ್ಲಿ ಸರ್ವೆ ನಂಬರ್ 1 ನಿವೇಶನ ಸಂಖ್ಯೆ 6 ರಲ್ಲಿ 78 ಎಕರೆ ಜಮೀನನ್ನು ಸ್ಟೇರ್ ಇಂಡಿಯಾ ಸಂಸ್ಥೆಗೆ ನೀಡಲಾಗಿತ್ತು, ಇತ್ತೀಚೆಗೆ ಆ ಸಂಸ್ಥೆ ಸ್ಟೇರ್ ಇಂಡಿಯಾ ಹೆಸರನ್ನು ಕಾನ್ ಕಾರ್ಡ್ ಎಂದು ಬದಲಾವಣೆ ಮಾಡಿಕೊಂಡಿದೆ.
ವಿವಾದ ಸೃಷ್ಟಿಯಾಗಿರುವ ಭೂಮಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದೆ. ಭೂಮಿ ಪಡೆದಿರುವ ಕಂಪೆನಿಯು ಈ ವರೆಗೂ ಉತ್ಪಾದನೆ ಆರಂಭಿಸಿಲ್ಲ. ಆದರೆ ತನ್ನ ಮೂಲ ಉದ್ದೇಶವನ್ನೇ ಬದಲಾವಣೆ ಮಾಡಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದೆ. ಈ ಹಗರಣವನ್ನು ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಮರಿತಿಬ್ಬೇಗೌಡ ಒತ್ತಾಯಿಸಿದರು.
ಈ ಕುರಿತು ಉತ್ತರಿಸಿದ ಸಚಿವ ನಿರಾಣಿ, 52 ವರ್ಷಗಳ ಹಿಂದೆ ಭೂಮಿ ವರ್ಗಾವಣೆ ವ್ಯವಹಾರ ನಡೆದಿದೆ. ಆನಂತರ ಕೆಲವೊಂದು ಪ್ಲಾನ್ ಗಳನ್ನು ಬದಲಾವಣೆ ಮಾಡಲಾಗಿದೆ.
ಮೂರು ಎಕರೆ ಪ್ರದೇಶದ ಕುರಿತು ವಿವಾದವಿದೆ. ಶೇ.30ರಷ್ಟು ಹಣ ಪಾವತಿಸಿ ಉಳಿದ ಹಣ ಬಾಕಿ ಉಳಿಸಿಕೊಂಡ ಹಲವಾರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಅಂತಹವುಗಳಿಂದ ಮೂರು ಸಾವಿರ ಕೋಟಿ ರೂಪಾಯಿ ಕೆಐಎಡಿಬಿಗೆ ಬಾಕಿ ಬರಬೇಕಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ದಿನಗಳಲ್ಲಿ ವಿಸ್ತೃತ ಉತ್ತರ ನೀಡಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!