ಹೊಸ ದಿಗಂತ ವರದಿ, ಶಿವಮೊಗ್ಗ:
ಅವೈಜ್ಞಾನಿಕ ಹಾಗೂ ಸಮುದಾಯಗಳ ನಡುವೆ ಜಗಳಕ್ಕೆ ಕಾರಣವಾಗಿರುವ ಸದಾಶಿವ ಆಯೋಗದ ವರದಿಯನ್ನು ಸರ್ಕಾರ
ವಜಾ ಮಾಡದಿದ್ದರೆ ಹಂತ ಹಂತವಾಗಿ ಹೋರಾಟ ನಡೆಸುವುದಾಗಿ ನ್ಯಾ. ಸದಾಶಿವ ಆಯೋಗ ವಿರೋಧಿ ಹೋರಾಟ ಸಮಿತಿ ಜಿಲ್ಲಾ ಶಾಖೆ ಗೌರವಾಧ್ಯಕ್ಷ ಚೂಡಾನಾಯ್ಕ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ 99 ಸಮುದಾಯಗಳ ಮೇಲೆ ತೂಗುಗತ್ತಿಯಾಗಿರುವ ಈ ವರದಿಯನ್ನು ಇಷ್ಟರಲ್ಲಿಯೇ ವಜಾ ಮಾಡಬೇಕಿತ್ತು. ಆದರೆ ಯಾವುದೇ ಸರ್ಕಾರಗಳು ಅದಕ್ಕೆ ಮನಸ್ಸು ಮಾಡಿಲ್ಲ. ಈಗ ಅದನ್ನು ಜಾರಿಗೊಳಿಸಲು ಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.
ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಪದೇ ಪದೇ ಒತ್ತಡ ಹೇರುತ್ತಿರುವ ಸಚಿವ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರನ್ನು ಸರ್ಕಾರ ಹತೋಟಿಯಲ್ಲಿಟ್ಟುಕೊಳ್ಳಬೇಕು. ಮೀಸಲಾತಿಯನ್ನು ಕಸಿದುಕೊಳ್ಳುವ ಯತ್ನ ನಡೆಸಬಾರದೆಂದು ಆಗ್ರಹಿಸಿದರು.