26 ದೇಶಗಳಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕೆ ಕರೆ ನೀಡಿ ಭಾರತಕ್ಕೆ ಮರಳಿದ ಸದ್ಗುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಪ್ಪತ್ತಾರು ದೇಶಗಳಲ್ಲಿ ಬೈಕ್​ ಮೂಲಕ ಪ್ರಯಾಣ ನಡೆಸಿ ಹಾಯ್ದು ಮಣ್ಣು ಉಳಿಸಿ ಅಭಿಯಾನ ಕೈಗೊಂಡಿರುವ ಈಶ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಇಂದು ಭಾರತಕ್ಕೆ ಮರಳಿದ್ದು, ಅವರು ಗುಜರಾತ್‌ನ ಜಾಮ್‌ನಗರದ ಬಂದರಿನಲ್ಲಿ ಬಂದಿಳಿಯುವ ಮೂಲಕ ಸ್ವದೇಶಕ್ಕೆ ಪದಾರ್ಪಣೆ ಮಾಡಿದರು.

ಯೂರೋಪ್‌, ಮಧ್ಯ ಏಷ್ಯಾ ಮತ್ತು ಮಧ್ಯಪೂರ್ವ ದೇಶಗಳಲ್ಲಿ ‘journey for soil’ ಅಭಿಯಾನದ ಪಯಣ ಅಭೂತಪೂರ್ವ ಸ್ವೀಕೃತಿ ಮತ್ತು ಯಶಸ್ಸು ಕಂಡಿದೆ. ಸದ್ಗುರು ಅವರು ಓಮನ್‌ ದೇಶದ ಪೋರ್ಟ್‌ ಸುಲ್ತಾನ್‌ ಕಾಬೂಸ್‌ನಿಂದ ಹೊರಟು ಹಿಂದೂ ಮಹಾಸಾಗರದಲ್ಲಿ ಮೂರು ದಿನಗಳ ಸಮುದ್ರಯಾನ ಮಾಡಿದ್ದರು.

ಭಾರತೀಯ ನೌಕಾಪಡೆಯುಸಂಗೀತ ವಾದನದಲ್ಲಿ Save soil anthem ಗೀತೆಯೊಂದಿಗೆ ಸದ್ಗುರು ಅವರಿಗೆ ಅಭೂತಪೂರ್ವ ಸ್ವಾಗತ ನೀಡಿತು. ಸದ್ಗುರು ಅವರು ಭರತ ಭೂಮಿಯಲ್ಲಿ ‘ಮಣ್ಣು ಉಳಿಸಿ’ ಅಭಿಯಾನದ ಆರಂಭದ ದ್ಯೋತಕವಾಗಿ ಸಸಿಯೊಂದನ್ನು ನೆಟ್ಟರು.

ವಿವಿಧ ರಾಜ್ಯಗಳಿಂದ ಬಂದು ಸೇರಿದ್ದ ಸಾವಿರಾರು ಜನರು ಘೋಷಣೆಗಳ ಕಲರವ ನಡುವೆ ಸದ್ಗುರು ಅವರು ಮಾತನಾಡಿ, ‘ಮಣ್ಣು ಉಳಿಸಿ’ ಅಭಿಯಾನದ ತೀವ್ರಗತಿಯನ್ನು ಕಾಪಾಡಿ ಮುಂದುವರಿಸುವಂತೆ ಕರೆಕೊಟ್ಟರು. ಕೊನೇಪಕ್ಷ ಮುಂದಿನ 30 ದಿನಗಳ ಕಾಲ ನೀವು ನಿಮ್ಮ ಧ್ವನಿಯನ್ನು ಮುಗಿಲು ಮುಟ್ಟುವಂತೆ ಏರಿಸಬೇಕು, ಕೇವಲ ಒಂದು ದಿನದ ಘೋಷಣೆ ಕೂಗುವುದಲ್ಲ. ಜಗತ್ತಿನ ಎಲ್ಲ ಸರ್ಕಾರಗಳೂ ಮಣ್ಣಿನ ಪುನರುಜ್ಜೀವನ ಮಾಡಲು ನೀತಿ-ನಿರೂಪಣೆಯ ಬದಲಾವಣೆ ಮಾಡಿದೆ ಎಂದು ತಿಳಿದು ಬರುವ ತನಕ, ನಿರಂತರವಾಗಿ ಈ ಅಭಿಯಾನದ ಘೋಷವನ್ನು ಪ್ರತಿದಿನ 15-20 ನಿಮಿಷಗಳ ಕಾಲ ಎಲ್ಲರಿಗೂ ಕೇಳುವಂತೆ ಮಾಡಿ ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ಸೋಷಿಯಲ್‌ ಮೀಡಿಯಾ ಬಳಸಿ ಮಣ್ಣಿನ ಬಗ್ಗೆ ಮಾತನಾಡಬೇಕು. ನಮ್ಮ ಅಂಗೈನಲ್ಲಿ ಇರುವ ಪವರ್‌ಹೌಸ್‌ ಆಗಿರುವ ಮೊಬೈಲ್​ಫೋನ್​ಗಳು ಕೈಯಲ್ಲಿರುವಾಗ ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಯಾಗುವಂತೆ ಮಾಡಬೇಕು ಎಂದು ಹೇಳಿದರು.

ಜಾಮ್‌ನಗರದ ಜಾಮ್‌ಸಾಹಿಬ್‌ನ ಪ್ರತಿನಿಧಿ ಎಕ್ತಬಾ ಸೋಧಾ ಅವರ ಜೊತೆ ಹಲವು ಧಾರ್ಮಿಕ ಮತ್ತು ರಾಜಕೀಯ ನೇತಾರರು, ಭಾರತೀಯ ನೌಕಾಪಡೆಯ ಕಮಾಂಡಿಂಗ್‌ ಆಫೀಸರ್‌ಗಳು ಮತ್ತು ಭಾರತೀಯ ವಾಯುಪಡೆಯ ಅಧಿಕಾರಿಗಳು ಸದ್ಗುರು ಅವರನ್ನು ಬಂದರಿನಲ್ಲಿ ಸ್ವಾಗತಿಸಿದರು.

ಸದ್ಗುರು ಅವರ 100 ದಿನಗಳ 30,000 ಕಿಲೋಮೀಟರ್‌ಗಳ ಮೊಟಾರ್‌ ಬೈಕ್‌ ಪಯಣದ ‘journey for soil’ ಮಣ್ಣನ್ನು ಅಳಿವಿನಿಂದ ಉಳಿಸಿ ಎಂಬ ಜಾಗತಿಕ ಅಭಿಯಾನ ಈ ವರ್ಷದ ಮಾರ್ಚ್‌ 21ರಂದು ಲಂಡನ್‌ನಿಂದ ಆರಂಭವಾಗಿತ್ತು. ಇದು ಜೂನ್‌ ತಿಂಗಳ ಕೊನೆಯಲ್ಲಿ ಕಾವೇರಿ ನದಿಯ ಕೊಳ್ಳದಲ್ಲಿ ಸಂಪನ್ನವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!