ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಅದ್ದೂರಿ ಮೆರವಣಿಗೆ: ಏಲಕ್ಕಿ ನಗರದಲ್ಲಿ ಕನ್ನಡದ ಕಂಪು

ಹೊಸದಿಗಂತ ವರದಿ ಹಾವೇರಿ:

ಏಲಕ್ಕಿ ನಾಡಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಶುಕ್ರವಾರ ಬೆಳಗ್ಗೆ ಸಮ್ಮೇಳನ ನಡೆಯುವ ಮುಖ್ಯ ವೇದಿಕೆ ಎದುರು ಧ್ವಜಾರೋಹಣ ನೆರವೇರಿಸಲಾಯಿತು.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಯಿತು. ಭುವನೇಶ್ವರಿ ತಾಯಿಯ ಪ್ರತಿಮೆಗೆ ಆರತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಅವರು ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜುಕುಮಾರ ನೀರಲಗಿ ಸೇರಿ ಹಲವರು ಇದ್ದರು.

ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಅವರನ್ನು ಕರೆತರಲಾದ ಸಾಲಂಕೃತ ಸಾರೋಟಿನ ಮುಂದೆ, ಕನ್ನಡಾಂಬೆ ಭುವನೇಶ್ವರಿ ರಥ ಸಾಗುತ್ತಿದ್ದರೆ, ವಿವಿಧ ಕಲಾತಂಡಗಳಾದ ಮಹಿಳೆಯರ ಚಂಡ್ಯೆವಾದ್ಯ, ಡೊಳ್ಳು ಕುಣಿತ, ಮರಗಾಲು ವೇಷ, ಲಂಬಾಣಿ ನೃತ್ಯ, ಕಂಮಸಾಳೆ, ಜಾಂಜ್, ಕಹಳೆ, ಮಹಿಳಾ ಕಂಮಸಾಳೆ, ಚಾಮರ, ಹಲಿಗೆ, ದೊಡ್ಡ ಹಲಿಗೆ ವಾದ್ಯೆ, ಗೊಂಬೆ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳು ನೋಡುಗರ ಮನಸೂರೆಗೊಂಡವು.

ಸಮ್ಮೇಳನಾಧ್ಯಕ್ಷರ ಸಾರೋಟಿನ ಹಿಂಭಾಗದಲ್ಲಿ ಆಗಮಿಸುತ್ತಿದ್ದ ಸಾಲು ಸಾಲು ಸಾರೋಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಆಸಿನರಾಗಿದ್ದರು.

ಇಲ್ಲಿನ ಐತಿಹಾಸಿಕ ಪುರಸಿದ್ಧೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳದ ವೇದಿಕೆವರೆಗೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭ ಸಮ್ಮೇಳನಾಧ್ಯಕ್ಷ ದೊಡ್ಡ ರಂಗೇಗೌಡ ಮಾತನಾಡಿ, ಹಾವೇರಿಗೆ ಪವಿತ್ರ ಯೋಗವಿದೆ. ನೀವು- ನಾವು ಎಲ್ಲರೂ ಸಂಭ್ರಮಿಸುವ ಕ್ಷಣವಿದು. ಇಲ್ಲಿನ ಜನ, ಸಂಸ್ಕೃತಿ ನನ್ನ ಮೇಲೆ ಪ್ರಭಾವ ಬೀರಿದೆ. ಸಮ್ಮೇಳನವನ್ನು ಜಾತ್ರೆ ಅಂತ ಹೇಳುತ್ತಾಯಿದಾರೆ. ಇದು ಸಾಹಿತಿಗಳ ಸಮ್ಮಿಲನ. ನೆಲ ಜಲ ಭಾಷೆ ವಿಚಾರವಾಗಿ ಈ ಸಮ್ಮೇಳನ ಪ್ರಭಾವ ಬೀರಲಿದೆ ಎಂದರು.

ಮೆರವಣಿಗೆಯುದ್ದಕ್ಕೂ ಕನ್ನಡ ಕಂಪಿನ ಜಯಘೋಷ ಮೊಳಗುತ್ತಿತ್ತು. ಎಲ್ಲಡೆ ಹಳದಿ, ಕೆಂಪಿನ ತೊರಣ ಕಂಗೊಳಿಸುತ್ತಿತ್ತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಕಸಾಪ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಹೆಜ್ಜೆ ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!