ಸಲ್ಮಾನ್‌ ಖಾನ್‌ಗೆ ಸಹಾಯ ಮಾಡುವವರಿಗೆ ಇದೇ ಗತಿ: ಸಿದ್ದಿಕ್ಕಿ ಹತ್ಯೆ ಬಳಿಕ ಲಾರೆನ್ಸ್ ಗ್ಯಾಂಗ್ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹಂಚಿಕೊಂಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ರವಾನಿಸಿದೆ.

66 ವರ್ಷದ ಸಿದ್ದಿಕಿ ಅವರನ್ನು ಬಾಂದ್ರಾದಲ್ಲಿರುವ ಅವರ ಮಗ ಜೀಶನ್ ಸಿದ್ದಿಕ್ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಶನಿವಾರ ಹತ್ಯೆ ಮಾಡಿದ್ದರು.ಸಿದ್ದಿಕಿ ಜೊತೆ ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನಿಕಟ ಒಡನಾಟ ಹೊಂದಿದ್ದರು.

ಏಪ್ರಿಲ್ 14 ರಂದು ಬಾಂದ್ರಾದಲ್ಲಿನ ನಟನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಇಬ್ಬರು ಶೂಟರ್‌ಗಳು ಐದು ಸುತ್ತು ಗುಂಡು ಹಾರಿಸಿ ಸಲ್ಮಾನ್‌ ಖಾನ್‌ ಹತ್ಯೆಗೆ ಯತ್ನಿಸಿದ್ದರು. ಇದಾದ ತಿಂಗಳುಗಳ ನಂತರ ಎನ್‌ಸಿಪಿ ನಾಯಕನ ಹತ್ಯೆಯಾಗಿದೆ.

ಸಿದ್ದಿಕಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೊಬ್ಬ, ಬಾಲಿವುಡ್ ತಾರೆ ಮತ್ತು ಅವರ ಪರಿಚಯಸ್ಥರಿಗೆ ಬೆದರಿಕೆ ಹಾಕಿದ್ದಾನೆ. ‘ಸಲ್ಮಾನ್ ಖಾನ್ ಅಥವಾ ದಾವೂದ್ ಗ್ಯಾಂಗ್‌ಗೆ ಸಹಾಯ ಮಾಡುವವರಿಗೆ ಇದೇ ಗತಿ’ ಎಂದು ಬೆದರಿಕೆ ಸಂದೇಶ ರವಾನಿಸಿದ್ದಾನೆ.

ಸಲ್ಮಾನ್ ಖಾನ್ ಮತ್ತು ಭೂಗತ ಪಾತಕಿಗಳಾದ ಅನುಜ್ ಥಾಪನ್ ಮತ್ತು ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧವೇ ಸಿದ್ದಿಕಿ ಹತ್ಯೆಗೆ ಕಾರಣ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಶುಬು ಲೊಂಕರ್ ಮಹಾರಾಷ್ಟ್ರದ ಪೋಸ್ಟ್‌ನಲ್ಲಿ, ಓಂ, ಜೈ ಶ್ರೀ ರಾಮ್, ಜೈ ಭಾರತ್, ನಾನು ಜೀವನದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದೇನೆ. ಸಂಪತ್ತು ಮತ್ತು ದೇಹವನ್ನು ಧೂಳಿನಂತೆ ಪರಿಗಣಿಸುತ್ತೇನೆ. ನಾನು ಸರಿಯಾಗಿದ್ದನ್ನು ಮಾತ್ರ ಮಾಡಿದ್ದೇನೆ. ಸ್ನೇಹದ ಕರ್ತವ್ಯವನ್ನು ಗೌರವಿಸಿದೆ. ಸಲ್ಮಾನ್ ಖಾನ್‌.. ನಮಗೆ ಈ ಯುದ್ಧ ಬೇಡ. ಆದರೆ ನಮ್ಮ ಸಹೋದರ ಸಾಯುವಂತೆ ನೀನು ಮಾಡಿದೆ ಎಂದು ಬರೆದುಕೊಂಡಿದ್ದಾನೆ.

ನಮಗೆ ಯಾರೊಂದಿಗೂ ದ್ವೇಷವಿಲ್ಲ. ಸಲ್ಮಾನ್ ಖಾನ್ ಅಥವಾ ದಾವೂದ್ ಗ್ಯಾಂಗ್‌ಗೆ ಸಹಾಯ ಮಾಡುವ ಯಾರಾದರೂ ಇಂತಹ ಸ್ಥಿತಿಗೆ ಸಿದ್ಧರಾಗಿರಬೇಕು. ಯಾರಾದರೂ ನಮ್ಮ ಸಹೋದರರನ್ನು ಕೊಂದರೆ, ನಾವು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತೇವೆ. ನಾವು ಎಂದಿಗೂ ಮೊದಲಿಗೆ ಹೊಡೆಯುವುದಿಲ್ಲ. ಜೈ ಶ್ರೀ ರಾಮ್, ಜೈ ಭಾರತ್, ಹುತಾತ್ಮರಿಗೆ ನಮನ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಈ ಎಚ್ಚರಿಕೆ ಬೆನ್ನಲ್ಲೇ ಪೊಲೀಸರು ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿದ್ದಾರೆ. ಇದೀಗ ಈ ಪೋಸ್ಟ್ ಕುರಿತ ತನಿಖೆಯೂ ನಡೆಯುತ್ತಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!