ಕೇರಳದಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಉಜ್ವಲವಾಗಿ ಬೆಳಗಿದ ಸ್ಯಾಮ್ಯುಯೆಲ್ ಆರನ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ)
ಸ್ಯಾಮ್ಯುಯೆಲ್ ಆರನ್ ಅವರು 1894 ರ ಮಾರ್ಚ್ 13 ರಂದು ಕಣ್ಣೂರು ಜಿಲ್ಲೆಯ ಎಜಿಮಲದಲ್ಲಿ ಜನಿಸಿದರು.
ಅವರು ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೆ ಮಲಬಾರ್‌ನಲ್ಲಿ ಕೈಗಾರಿಕೋದ್ಯಮಿ ಮತ್ತು ಕೃಷಿಕರಾಗಿದ್ದರು. 1920 ರಲ್ಲಿ ಕೆ. ಮಾಧವನ್ ನಾಯರ್ ಮತ್ತು ಕೆ.ಕೇಳಪ್ಪನ್ ಅವರ ಪ್ರಭಾವದಿಂದ ಮಲಬಾರ್‌ನಲ್ಲಿ ಅಸಹಕಾರ ಚಳವಳಿಯ ಸಮಯದಲ್ಲಿ ಅವರು ರಾಷ್ಟ್ರೀಯ ಚಳವಳಿಯತ್ತ ಆಕರ್ಷಿತರಾದರು. ಅವರ ಪತ್ನಿ ಗ್ರೇಸಿ ಆರೋನ್ ಸಹ ಮಲಬಾರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ಯಾಮ್ಯುಯೆಲ್ ಆರನ್ ಮಲಬಾರ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಆರಂಭಿಕ ಸ್ವಾತಂತ್ರ್ಯ ಹೋರಾಟಗಾರರು. ಸ್ಯಾಮ್ಯುಯೆಲ್ ಆರನ್ ಗಾಂಧೀಜಿಯವರ ಸ್ವರಾಜ್ ನಿಧಿಗೆ ಕೇರಳದಲ್ಲಿ ಹಣವನ್ನು ಸಂಗ್ರಹಿಸಲು ಹೆಚ್ಚಿನ ಉಪಕ್ರಮವನ್ನು ತೆಗೆದುಕೊಂಡರು. ಮತ್ತು ಹೆಚ್ಚಿನ ಹಣವನ್ನು ಸಂಗ್ರಹಿಸಿ ದೇಣಿಗೆ ನೀಡಿದರು. ಇದರಿಂದಾಗಿ ಅವರು ಗಾಂಧೀಜಿಯೊಂದಿಗೆ ನೇರ ಸಂಬಂಧಕ್ಕೆ ಬಂದರು.
ಕಣ್ಣೂರಿನಲ್ಲಿ ಬ್ರಿಟೀಷರಿಂದ ಬಂಧಿತ ಕಾಂಗ್ರೆಸ್ ನಾಯಕರಿಗೆ ಸಹಾಯ ಮಾಡಿದರು. ಸ್ಯಾಮ್ಯುಯೆಲ್ ಆರನ್ ಮೌಲಾನಾ ಮುಹಮ್ಮದ್ ಅಲಿ ಮತ್ತು ಇತರ ರಾಷ್ಟ್ರೀಯ ನಾಯಕರ ರಾಷ್ಟ್ರೀಯವಾದಿ ಭಾಷಣವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿದರು.  ಬ್ರಿಟಿಷರಿಂದ ನಿಷೇಧವಿದ್ದರೂ ಅದನ್ನು ಮಲಬಾರ್‌ನಲ್ಲಿ ವಿತರಿಸಿದರು. ಅವರು 1928 ರ ಪಯ್ಯನ್ನೂರ್ ಕಾಂಗ್ರೆಸ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾಗಿದ್ದರು ಮತ್ತು ಸಭೆಯಲ್ಲಿ ಜವಾಹರಲಾಲ್ ನೆಹರು ಮತ್ತು ಇತರ ರಾಷ್ಟ್ರೀಯ ನಾಯಕರಿಗೆ ಎಲ್ಲಾ ತೆರನಾದ ಬೆಂಬಲವನ್ನು ನೀಡಿದರು.
ಕಾಂಗ್ರೆಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಬ್ರಿಟಿಷರು ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು, ಆದರೆ ಅವರು ಅವನ್ನೆಲ್ಲಾ ದಿಕ್ಕರಿಸಿ ತಮ್ಮ ರಾಷ್ಟ್ರೀಯತಾವಾದಿ ರಾಜಕೀಯ ಚಟುವಟಿಕೆಗಳನ್ನು ಮುಂದುವರೆಸಿದರು. ಅವರು ಮೇ 1930 ರಲ್ಲಿ ಕೇರಳ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಉಪ್ಪಿನ ಮೆರವಣಿಗೆಗೆ ಅವರು ಬೆಂಬಲ ಸೂಚಿಸಿದ್ದರಿಂದಾಗಿ, ಬ್ರಿಟಿಷರು ಅವರನ್ನು ಕಣ್ಣೂರಿನಲ್ಲಿ ಬಂಧಿಸಿ ವೆಲ್ಲೂರು ಜೈಲಿಗೆ ಕಳುಹಿಸಿದರು. ಪೊಲೀಸರು ಆತನ ಮನೆ, ಆಸ್ತಿಯನ್ನು ಜಪ್ತಿ ಮಾಡಿದರು.
1931 ರಲ್ಲಿ ಅವರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದಾಗ ಕ್ಯಾಲಿಕಟ್‌ನಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಅವರ ಪತ್ನಿ ಗ್ರೇಸಿ ಆರನ್ ಅವರನ್ನು ಸಹ ಬಂಧಿಸಿ ಅವರಿಬ್ಬರನ್ನೂ ಜೈಲಿನಲ್ಲಿರಿಸಲಾಯಿತು. ಆರನ್ 1934 ರಲ್ಲಿ ಪಶ್ಚಿಮ-ಕರಾವಳಿ ಕ್ಷೇತ್ರದಿಂದ ಕೇಂದ್ರ ವಿಧಾನಸಭೆಗೆ ಆಯ್ಕೆಯಾದರು. ಅವರು 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಬಲವಾಗಿ ಬೆಂಬಲಿಸಿದರು ಮತ್ತು ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಮತ್ತು ಮಧ್ಯಮ ನಾಯಕರಿಗೆ ಎಲ್ಲಾ‌ ರೀತಿಯ ಸಹಾಯವನ್ನು ನೀಡಿದರು. ಅವರು 1975 ರಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!