ಹೊಸದಿಗಂತ ವರದಿ, ಕಾರವಾರ :
ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಚತುಷ್ಪಥ ಹೆದ್ದಾರಿ–66ರಲ್ಲಿ ಹಲವು ಕಾಮಗಾರಿಗಳ ಮಂಜೂರಾತಿ ದೊರಕಿಸಿಕೊಟ್ಟಿದ್ದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ ಹಾಗೂ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಅಂಕೋಲಾದ ವಿಠ್ಠಲ ಘಾಟ್ ಬಳಿ ಅಂಡರಪಾಸ್ ನಿರ್ಮಾಣ ಬಹುಜನರ ಬೇಡಿಕೆಯಾಗಿತ್ತು. ಅದಕ್ಕೆ ಹಣ ಮಂಜೂರಾತಿ ದೊರಕಿದೆ. ವಿಠ್ಠಲಘಾಟ್, ಭಟ್ಕಳ ತಾಲೂಕಿನ ಮೂಡಭಟ್ಕಳ ಹಾಗೂ ಕಾಯ್ಕಿಣಿ ಸಮೀಪ ಅಂಡರ್‌ಪಾಸ್ ನಿರ್ಮಾಣಕ್ಕೆ 47.48 ಕೋಟಿ ರೂಪಾಯಿ ಮಂಜೂರಾತಿ ದೊರಕಿದೆ. ಸದ್ಯದಲ್ಲಿಯೇ ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕುಮಟಾ ತಾಲೂಕಿನ ಹೊನ್ಮಾಂವ್ ಮತ್ತು ಮಾನೀರ ಸಮೀಪ ಹೊಸ ಸೇತುವೆ ನಿರ್ಮಾಣಕ್ಕೆ 9.1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆಗಳನ್ನೂ ಅಂತಿಮಗೊಳಿಸಲಾಗಿದೆ. ಕಾರವಾರದಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಕುಸಿದು ಬಿದ್ದಿದ್ದ ಕಾಳಿ ಸೇತುವೆಯ ಅವಶೇಷಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲಾಗಿದೆ. ಕಾಳಿ ನದಿಗೆ ತ್ವರಿತಗತಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸುವುದಾಗಿ ಸಂಸದರು ತಿಳಿಸಿದ್ದಾರೆ.
ಈ ಕಾಮಗಾರಿಗಳು ಜನತೆಯ ತುರ್ತು ಬೇಡಿಕೆಗಳಾಗಿದ್ದವು. ಈ ಹಿಂದೆ ನಾನೂ ಕೂಡ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆದಿದ್ದೆ. ಈಗ ಸಂಸದರು ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿಗಳನ್ನು ಮಂಜೂರು ಮಾಡಿ ಜನತೆಯ ಬೇಡಿಕೆಗಳನ್ನು ಈಡೇರಿಸಿದ್ದಾರೆ.
ಈ ಕಾಮಗಾರಿ ಮಂಜೂರಾತಿಗಾಗಿ ಪ್ರಯತ್ನಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಂಜೂರಾತಿ ಮಾಡಿದ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.