ನವೋದಯ ಕಾಲಘಟ್ಟದ ಬಹುಮುಖ ಪ್ರತಿಭೆ ಲೇಖಕಿ ಸರಸ್ವತಿಬಾಯಿ ರಾಜವಾಡೆ

-ಶೈಲಜಾ ಪುದುಕೋಳಿ,
ಉಪನ್ಯಾಸಕಿ, ಮಂಗಳೂರು

ನಾಳೆ (ಅಕ್ಟೋಬರ್ 3) ಕನ್ನಡ ನಾಡಿನ ನವೋದಯ ಕಾಲ ಘಟ್ಟದ ಬಹುಮುಖ ಪ್ರತಿಭೆಯ ಲೇಖಕಿ ಸರಸ್ವತಿಬಾಯಿ ರಾಜವಾಡೆಯವರ 109 ನೇ ಜನ್ಮದಿನ. ಆಕೆ ಗಿರಿಬಾಲೆ, ವೀಣಾಪಾಣಿ, ವಿಶಾಖ ನಾಮಾಂಕಿತೆಯಾಗಿ ಗುರುತಿಸಿಕೊಂಡವರು. ಕಥೆ, ಕವನ, ನಾಟಕ, ಅನುವಾದ, ಕಾದಂಬರಿ, ವಿಮರ್ಶೆ, ಪ್ರಬಂಧ, ಅಡುಗೆ, ಔಷಧಿ -ಆರೋಗ್ಯ, ಅಂಕಣ ಬರಹ, ಧಾರ್ಮಿಕ ಸಾಹಿತ್ಯವಲ್ಲದೆ ಪತ್ರಿಕೋದ್ಯಮಿಯಾಗಿ, ಸಂಪಾದಕಿಯಾಗಿ ಸ್ತ್ರೀಯರಿಗೆ ನ್ಯಾಯ ದೊರಕಿಸಿ ಕೊಡಲು ‘ಸುಪ್ರಭಾತ’ವೆಂಬ ಪತ್ರಿಕೆಯನ್ನು ಆರಂಭಿಸಿ ನೊಂದವರ ಧ್ವನಿಯಾದರು. ಕನ್ನಡದ ಅಗ್ರಮಾನ್ಯ ಲೇಖಕಿಯರಲ್ಲಿ ಒಬ್ಬರಾದರೂ ಎಲೆಮರೆಯ ಕಾಯಿಯಂತೆ ಇದ್ದು ಮಾಗಿದವರು.
1913 ಅ. 3 ರಂದು ಉಡುಪಿ ಜಿಲ್ಲೆಯ ಬಳಂಜಾಲದಲ್ಲಿ ಜನಿಸಿ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರು. ಜನನಾರಭ್ಯ ತಂದೆಯ ಮುಖ ನೋಡಿರದ ಸರಸ್ವತಿಗೆ ತರಗತಿ ವಿದ್ಯೆಯೂ ತಲೆಗೆ ಹತ್ತಲಿಲ್ಲ. ಶಾಲಾ ಶಿಕ್ಷಣ ಮೊಟಕುಗೊಂಡರೂ ಚತುರಮತಿ ಸರಸ್ವತಿ ಅಂಬಾ ಪ್ರಸಾದಿತ ನಾಟಕ ಮಂಡಳಿಯ ನಾಟಕವೊಂದನ್ನು ನೋಡಿದ್ದು ಆಕೆಯ ಜೀವನದಲ್ಲಿ ತಿರುವಿಗೆ ನಾಂದಿಯಾಯಿತು. ನಾಟಕ, ಸಂಗೀತ ಕಲೆಗಳು ದೈವದತ್ತವೋ ಎಂಬಂತೆ ಒಲಿದು ಬಂದವು. ಹತ್ತನೇ ವಯಸ್ಸಿನಲ್ಲಿ ಆಕೆ ಸಿನಿಮಾ ರಂಗದತ್ತ ಹೆಜ್ಜೆ ಹಾಕುವಂತೆ ಮಾಡಿತು. ಹದಿನೈದನೆ ವರ್ಷಕ್ಕೆ ತನ್ನ ತಂದೆಯ ವಯಸ್ಸಿನ ಅಂಬಿಕಾಪತಿ ರಾಯಶಾಸ್ತ್ರಿ ರಾಜವಾಡೆಯವರ ಜೊತೆ ಪಾಣಿಗ್ರಹಣವಾದ ಅನಂತರ ಅವರ ಜೀವನದಲ್ಲಿ ಮಹತ್ತರ ಬದಲಾವಣೆಯ ಪರ್ವ ಆರಂಭವಾಯಿತು. ಮುಂದೆ ಸಿಂಗಾಪುರದಲ್ಲಿ ಐಷಾರಾಮಿ ಬದುಕಿನ ಹೊಸ್ತಿಲು ತುಳಿದರು.

ಸ್ತ್ರೀ ವಿಮೋಚನೆಗಾಗಿ ಸಾಹಿತ್ಯ ಕ್ಷೇತ್ರವನ್ನು ಆತುಕೊಂಡರು:
‘ಭಾರ್ಯಾ ರೂಪವತಿ ಶತ್ರು ‘ ಎಂಬ ಭ್ರಮೆ ಗೊಳಗಾದ ರಾಯಶಾಸ್ತ್ರಿಗಳ ಬಂಗಲೆಯೊಳಗಿನ ಬದುಕು ಬಂಧನವಾಗಿ ಸರಸ್ವತಿಗೆ ಉಸಿರುಗಟ್ಟುವಂತೆ ಮಾಡಿತು. ದಾಂಪತ್ಯ ಜೀವನದಲ್ಲಿ ಸುಖ ಎಂಬುದು ಮರೀಚಿಕೆಯಾದರೂ, ಪತಿಯ ಪ್ರೇರಣೆಯಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದರು. ಪತಿ ಪುಸ್ತಕಗಳನ್ನು ಓದಲು ಅನುಕೂಲಿಸಿದ್ದರಿಂದ ಬೇರೆ ಭಾಷೆಗಳ ಕಲಿಕೆಗೂ ಅವಕಾಶವಾಯ್ತು. ಇದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅನರ್ಘ್ಯ ರತ್ನವೊಂದು ದೊರೆಯಿತು.
ಮನೆಮಾತು ಮರಾಠಿಯಾಗಿದ್ದು ಕನ್ನಡ ನಾಡು- ತುಳು ಪರಿಸರ ಭಾಷೆಯಾಗಿ ಜೊತೆಗೆ ಹಿಂದಿ, ತಮಿಳು, ಇಂಗ್ಲಿಷ್, ಸಂಸ್ಕೃತಗಳನ್ನು ಆರ್ಜಿಸಿಕೊಂಡು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಣ್ಣಿಗೆ ಕಟ್ಟುವಂತೆ ಸಾಹಿತ್ಯದ ಮೂಲಕ ಲೋಕಕ್ಕೆ ಸಾರುವ ಪ್ರಯತ್ನ ಮಾಡಿದರು.
‘ಚೇತರಿಸಿ ಭಗಿನಿಯರೇ ಸಾಕಿನ್ನು ತೂಕಡಿಕೆ, ಕ್ರೀತ ದಾಸಿಯರಾಗಿ ಬಾಳಿದುದು ಸಾಕಾಯ್ತು’… ಗಿರಿಬಾಲೆಯ ಕವನದ ಈ ಸಾಲುಗಳು ಅವರ ಬದುಕನ್ನು ಪ್ರತಿನಿಧಿಸುತ್ತವೆ.
ಕನಸು ಪೋಣಿಸುವ ಹದಿಹರೆಯದಲ್ಲಿ ಸ್ತ್ರೀಯರ ಸ್ಥಾನಮಾನ ಸಮಸ್ಯೆಗಳನ್ನು ತನ್ನವೇ ಎಂಬಂತೆ ಭಾವಿಸಿಕೊಂಡು ವಿಮೋಚನೆಗಾಗಿ ಸಾಹಿತ್ಯ ಕ್ಷೇತ್ರವನ್ನು ಆತುಕೊಂಡರು.
ಮೊದಲ ಕಥೆ ‘ನನ್ನ ಅಜ್ಞಾನ’ ಕಂಠೀರವ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಮುಂದೆ ಮೂರು ಕಥಾ ಸಂಕಲನಗಳನ್ನು ಸಾರಸ್ವತ ಜಗತ್ತಿಗೆ ನೀಡಲು ಅವರಿಗೆ ಪ್ರೋತ್ಸಾಹ ಸಿಕ್ಕಂತಾಯಿತು. ನಿಸರ್ಗ, ತಾಯಿ ತಂದೆ, ದೇವರು, ದೇಶಪ್ರೇಮ ಮುಖ್ಯವೆನಿಸುತ್ತ, ಭಕ್ತಿ ಪ್ರೀತಿ, ತ್ಯಾಗ ಮೊದಲಾದವನ್ನು ಅವರ ಕಥೆಗಳು ಅಭಿವ್ಯಕ್ತಿಸುತ್ತವೆ. ಮುಂದೆ ಪ್ರಗತಿಶೀಲ ಚಳವಳಿ ಸರಸ್ವತಿಯವರ ಮೇಲೆ ಬೀರಿದ ಪ್ರಭಾವವೆಂಬಂತೆ ವಿಧವಾ ಸಮಸ್ಯೆ, ಪುನರ್ ವಿವಾಹ, ವೇಶ್ಯಾ ಸಮಸ್ಯೆ, ಜಾತಿಭೇದ, ಜೀತ ಪದ್ಧತಿಗಳೇ ಕಥಾ ವಸ್ತುಗಳಾದಂತೆ ಕಂಡು ಬರುತ್ತದೆ. ಜನರಿಗೆ ಅಗತ್ಯವಾದ ವಿಚಾರಗಳನ್ನು ಸರಳವಾದ ಕನ್ನಡದಲ್ಲಿ ಒದಗಿಸಬೇಕು. ಸ್ತ್ರೀ ಶಿಕ್ಷಣದ ಮೂಲಕ ಅಂಧ ರೂಢಿಗಳಿಂದ ಮುಕ್ತರಾಗಬೇಕು ಎನ್ನುವ ಬದ್ಧತೆ ಅವರ ಬರಹಗಳಲ್ಲಿ ಕಾಣಿಸುವುದು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಆಶಾವಾದಿತನ ಪ್ರಬಂಧ ಬರವಣಿಗೆಗಳಲ್ಲಿ ಹೊಳಹುತ್ತದೆ. 1994 ರಲ್ಲಿ ತನ್ನ ಬದುಕಿನ ಅಂತಿಮ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರಲ್ಲದೆ ಉಡುಪಿಯಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ ದೇಗುಲವನ್ನು ನಿರ್ಮಿಸಿ ಕೀರ್ತನೆಗಳ ರಚನೆಯತ್ತ ಆಸಕ್ತಿವಹಿಸಿ ವಿರಕ್ತರಾಗಿ ಅನಂತದಲ್ಲಿ ಲೀನವಾದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!