Tuesday, August 16, 2022

Latest Posts

ಕೊಡಗು| ಶನಿವಾರ-ಭಾನುವಾರ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ: ಜಿಲ್ಲಾಧಿಕಾರಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಸರ್ಕಾರ ಗೌರಿ ಗಣೇಶ ಹಬ್ಬ ಆಚರಣೆ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯಲ್ಲಿ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿರುವುದರಿಂದ ಶನಿವಾರ ಮತ್ತು ಭಾನುವಾರದಂದು ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರದ ನಿಯಮವನ್ನು ಪಾಲಿಸುವಂತೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ ಹಣೇಶ ಹಬ್ಬ ಆಚರಣೆ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಈ ಬಗ್ಗೆ ಗಮನ ಸೆಳೆದ ಬಜರಂಗದಳದ ಚೇತನ್ ಅವರು, ಕೊಡಗು ಜಿಲ್ಲೆಯಲ್ಲಿ ವಾರಾಂತ್ಯ ಕಫ್ರ್ಯೂ ಇರುವುದರಿಂದ 5 ದಿನಗಳ ಒಳಗೆ ಗಣೇಶಮೂರ್ತಿ ವಿಸರ್ಜನೆಗೆ ಸರ್ಕಾರ ಅವಕಾಶ ಮಾಡಿರುವುದರಿಂದ ಕೊಡಗು ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರದಂದು ಗಣೇಶಮೂರ್ತಿ ವಿಸರ್ಜನೆಗೆ ಅವಕಾಶ ಮಾಡಬೇಕೆಂದು ಕೋರಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಅವಕಾಶ ಮಾಡಲಾಗುವುದು. ಆದರೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಸಂಜೆ 6 ಗಂಟೆಯೊಳಗೆ ಗಣೇಶಮೂರ್ತಿ ವಿಸರ್ಜನೆ ಮಾಡಬೇಕು ಎಂದು ಹೇಳಿದರು.
ಕಳೆದ ಬಾರಿಯಂತೆ ಶಾಂತಿಯುತವಾಗಿ ಗೌರಿ ಗಣೇಶ ಹಬ್ಬ ಆಚರಿಸಬೇಕು. ಕೋವಿಡ್ 19 ಇರುವುದರಿಂದ ಎಲ್ಲರೂ ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಕೋರಿದರು.
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಮತ್ತು ವಿಸರ್ಜನೆ ಸಂಬಂಧ ಸಾರ್ವಜನಿಕರಿಂದ ಮನವಿ ಸ್ವೀಕರಿಸುವಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಬಾರದು, ಸುಗಮ ಸುಲಲಿತವಾಗಿ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು, ಈಗಾಗಲೇ ಸರ್ಕಾರ ಗೌರಿ ಹಣೇಶ ಹಬ್ಬ ಆಚರಣೆ ಸಂಬಂಧ ಮಾರ್ಗಸೂಚಿ ಹೊರಡಿಸಿದೆ. ಆ ದಿಸೆಯಲ್ಲಿ ಪ್ರತಿಯೊಬ್ಬರೂ ಸುರಕ್ಷತೆ ಕಡೆ ಗಮನ ಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುವವರು ಪೊಲೀಸ್ ಇಲಾಖೆಗೆ ಮನವಿ ಮಾಡಬೇಕಿದೆ ಎಂದರು.
ಆ ನಿಟ್ಟಿನಲ್ಲಿ ಏಕಗವಾಕ್ಷಿಯಡಿ ಮನವಿ ಸ್ವೀಕರಿಸಲಾಗುವುದು, ಪೊಲೀಸ್, ಕಂದಾಯ, ನಗರಸಭೆ, ಸೆಸ್ಕ್ ಇತರ ಇಲಾಖೆಗಳು ಒಗ್ಗೂಡಿ ಕಾರ್ಯ ನಿರ್ವಹಿಸಲಿದೆ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ ಅವರು ಗಣೇಶಮೂರ್ತಿ ಪ್ರತಿಷ್ಠಾಪಿಸುವ ಮತ್ತು ವಿಸರ್ಜನೆ ಸ್ಥಳ ಹಾಗೂ ಸಮಯವನ್ನು ಮನವಿ ಪತ್ರದಲ್ಲಿ ತಿಳಿಸುವಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಕೋರಿದರು.
ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಡಿವೈಎಸ್ಪಿಗಳಾದ ಜಯಕುಮಾರ್, ಗಜೇಂದ್ರ ಪ್ರಸಾದ್, ಶೈಲೇಂದ್ರ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾ ರಾಜು, ಪೌರಾಯುಕ್ತ ರಾಮದಾಸ್, ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ತಹಶೀಲ್ದಾರ್ ಮಹೇಶ್ ಮತ್ತಿತರರು ಇದ್ದರು.
ಅಪರ ಜಿಲ್ಲಾಧಿಕಾರಿ ಅವರು ಸರ್ಕಾರದ ಮಾರ್ಗಸೂಚಿಯನ್ನು ವಿವಿಧ ಸಂಘ ಸಂಸ್ಥೆಗಳ ಗಮನಕ್ಕೆ ತಂದರು. ಗೌರಿ ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಕೋವಿಡ್-19 ಸೋಂಕು ಹರಡದಂತೆ ನಿಯಂತ್ರಿಸುವ ವಿಚಾರವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss