ಭಾರತದ ಮೊದಲ ಡಬ್ಬಿಂಗ್ ಸಿನಿಮಾ…ಅದೂ ನಮ್ಮ ಕನ್ನಡ ಚಲನಚಿತ್ರಕ್ಕೆ ಸಿಕ್ಕ ಗೌರವ!

ತ್ರಿವೇಣಿ ಗಂಗಾಧರಪ್ಪ

ʻಡಬ್ಬಿಂಗ್‌ʼ ಈ ಶತಮಾನದ ಸಿನಿಮಾ ಜಗತ್ತಲ್ಲಿ ಈ ಪದ ಹೊಸದೇನಲ್ಲ. ನೂರಾರು ಸಿನಿಮಾಗಳು ಈಗಾಗಲೇ ಬಣ್ಣದ ಲೋಕದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ತರ್ಜುಮೆಗೊಳ್ಳುತ್ತಿವೆ. ಆದರೆ, ಈ ಪದ್ದತಿ ಈಗಿಂದಲ್ಲ. 1940ರಲ್ಲೇ ಮೊಟ್ಟ ಮೊದಲ ಕನ್ನಡ ಸಿನಿಮಾ ಬೇರೊಂದು ಭಾಷೆಗೆ ಡಬ್‌ ಆಗಿತ್ತು ಎಂಬುದಕ್ಕೆ ಹೆಮ್ಮೆಯಾಗುತ್ತದೆ. ಅದು ಭಾರತದ ಮೊಟ್ಟ ಮೊದಲ ಡಬ್ಬಿಂಗ್‌ ಸಿನಿಮಾ ಕೂಡ ಹೌದು. ಅದುವರೆಗೂ ಯಾರೂ ಮಾಡದ ಪ್ರಯತ್ನವೊಂದು ಕನ್ನಡದ ಸಿನಿಮಾ ಮೇಲೆ ನಡೆದಿತ್ತು. ಇದು ಕನ್ನಡದ ಭಾಷಾ ಪ್ರೌಢಿಮೆ, ಸಾಹಿತ್ಯ, ಕಥೆ, ಸಿನಿಮಾದ ಮೇಲೆ ಇಲ್ಲಿನ ಜನರಿಗಿದ್ದ ಪ್ರೀತಿ ಎಲ್ಲವೂ ಬಿಂಬಿತವಾಗುತ್ತದೆ.

ಕನ್ನಡದಿಂದ ತಮಿಳು ಭಾಷೆಗೆ ಡಬ್‌ ಆದ ಸಿನಿಮಾ ʻಸತ್ಯ ಹರಿಶ್ಚಂದ್ರʼ. ಆಗ ʻAVMʼ ಪ್ರೊಡಕ್ಷನ್ಸ್ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಬ್ರಾಂಡ್ ಸೃಷ್ಟಿ ಮಾಡಿತ್ತು. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲದೆ ಹಿಂದಿಯಲ್ಲೂ ಹಲವು ಚಿತ್ರಗಳು ತಯಾರಾಗಿವೆ. 300ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಈ ನಿರ್ಮಾಣ ಸಂಸ್ಥೆ ಡಬ್ಬಿಂಗ್ ಚಿತ್ರಗಳತ್ತ ಮೊದಲ ಹೆಜ್ಜೆ ಇಟ್ಟಿದೆ. 1943ರ ಮೊದಲು ಆಯಾ ಭಾಷೆಯಲ್ಲಿ ತಯಾರಾದ ಸಿನಿಮಾ ನೋಡುತ್ತಿದ್ದರು. ಒಂದು ಒಳ್ಳೆಯ ಸಿನಿಮಾವನ್ನು ಬೇರೆ ಭಾಷೆಯಲ್ಲಿ ತೋರಿಸಬೇಕೆಂದಿದ್ದರೆ ಅದನ್ನು ಪುನಃ ಪೂರ್ತಿ ವೆಚ್ಚದಲ್ಲಿ ಸಿನಿಮಾವನ್ನು ರಿಮೇಕ್ ಮಾಡಿ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದರು. ಆದರೆ 1943, ಮೇ 28ರಂದು ರಲ್ಲಿ ತೆರೆಕಂಡ ‘ಸತ್ಯ ಹರಿಶ್ಚಂದ್ರ’ ಸಿನಿಮಾದೊಂದಿಗೆ ಈ ವಿಧಾನ ಅಂತ್ಯಗೊಂಡಿತು.

119ನಿಮಿಷಗಳಿರುವ ಈ ಚಿತ್ರವು ಮೈಸೂರು ಮತ್ತು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ದೊಡ್ಡ ಹಿಟ್ ಆಗಿತ್ತು. ಇದು 100 ದಿನಗಳ ಕಾಲ ಥಿಯೇಟರ್‌ಗಳಲ್ಲಿ ತನ್ನ ಸ್ಥಾನವನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿತ್ತು. ಈ ಚಿತ್ರಕ್ಕೆ ಶ್ರೀನಿವಾಸ್ ರಾಘವನ್ ಆಡಿಯೋ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಯಶಸ್ಸನ್ನು ಥಿಯೇಟರ್ ನಲ್ಲಿ ನೋಡಿದ ರಾಘವನ್ ಬುರ್ರಾ ಅವರಲ್ಲಿ ಒಂದು ಐಡಿಯಾ ಹುಟ್ಟುವಂತೆ ಮಾಡಿತು.

ಅದೇ ಬೇರೆ ಭಾಷೆಗೆ ಡಬ್‌ ಮಾಡುವ ವಿಧಾನ. ಲಿಪ್ ಸಿಂಕ್ ಮಾಡಿದರೆ ಈ ಚಲನಚಿತ್ರವನ್ನು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಬಹುದೆಂದು ಹೆಜ್ಜೆ ಇಟ್ಟರು. ಸಿನಿಮಾದ ಒಂದು ರೀಲ್ ನಲ್ಲಿದ್ದ ಡೈಲಾಗ್ ಟ್ರ್ಯಾಕ್ ಅಳಿಸಿ ತಮಿಳಿನಲ್ಲಿ ಡೈಲಾಗ್ ಬರೆದು ರೀಲ್ ಮಾಡಿದ್ರು. ಶ್ರೀನಿವಾಸ್ ರಾಘವನ್ ಅವರು ಆ ರೀಲ್ ಅನ್ನು ನಿರ್ಮಾಪಕ ಎ.ವಿ.ಮೇಯಪ್ಪನ್ ಅವರ ಬಳಿಗೆ ತೆಗೆದುಕೊಂಡು ಹೋಗಿ ತೋರಿಸಿದರು. ಅದನ್ನು ನೋಡಿದ ಮೇಯ್ಯಪ್ಪನವರು ಸತ್ಯ ಹರಿಶ್ಚಂದ್ರ ಅವರ ಸಿನಿಮಾವನ್ನು ಡಬ್ ಮಾಡಲು ನಿರ್ಧರಿಸಿದ್ದು, ಪೂರ್ಣ ವೆಚ್ಚದಲ್ಲಿ ಹೊಸ ಸಿನಿಮಾ ಮಾಡುವ ಬದಲು ಕಡಿಮೆ ವೆಚ್ಚದಲ್ಲಿ ಅದನ್ನು ಡಬ್ ಮಾಡಿ ಬಿಡುಗಡೆ ಮಾಡಿದರೆ ಒಳ್ಳೆಯದು ಅಂಬ ತೀರ್ಮಾನಕ್ಕೆ ಬಂದರು.

ಈ ಹಿನ್ನಲೆಯಲ್ಲಿ ನಿರ್ದೇಶಕ ಆರ್ ನಾಗೇಂದ್ರ ರಾವ್ ಹಾಗೂ ತಮಿಳಿನ ಡೈಲಾಗ್ ರೈಟರ್ ಒಬ್ಬರನ್ನು ಕರೆಸಿ ಇಡೀ ಚಿತ್ರಕ್ಕೆ ಸಂಭಾಷಣೆ ಬರೆಸಿದರು. ಸಿನಿಮಾದಲ್ಲಿ ನಟಿಸಿದ ನಟರನ್ನೇ ತಮಿಳಿನಲ್ಲೂ ಡಬ್ ಮಾಡಿದ್ದಾರೆ. ಸುಮಾರು 11,000 ಅಡಿಗಳಷ್ಟು ಇಡೀ ಫಿಲಂ ರೀಲ್‌ಗಾಗಿ ಹಗಲಿರುಳು ಶ್ರಮಿಸಿದ ನಂತರ ಒಂದೇ ಒಂದು ರೀಟೇಕ್ ಇಲ್ಲದೆ ಡಬ್ಬಿಂಗ್ ಪೂರ್ಣಗೊಂಡಿದೆ. ಕೊನೆಗೂ ತಮಿಳಿನಲ್ಲಿ ಬಿಡುಗಡೆಯಾದ ಈ ಡಬ್ಬಿಂಗ್ ಸಿನಿಮಾ ಸೂಪರ್ ಹಿಟ್ ಆಯಿತು. ಆ ನಂತರ ಡಬ್ಬಿಂಗ್ ಸಿನಿಮಾಗಳ ಸಂಪ್ರದಾಯ ಶುರುವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!