ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾ ಎಂದಕೂಡಲೇ ಅದು ತೈಲ ಮಾರುವ ಪ್ರಮುಖ ರಾಷ್ಟ್ರವಾಗಿ ಕಣ್ಮುಂದೆ ಬರುತ್ತದೆ. ಆದರೆ ಇಂಥ ಸೌದಿ ಸಹ ಈಗ ನವೀಕೃತ ಇಂಧನಗಳ ಬಗ್ಗೆ ಮಾತನಾಡುತ್ತಿದೆ. ಕಾರಣ, ಜಾಗತಿಕವಾಗಿ ಪಾಲಿಸಬೇಕಿರುವ ಪರಿಸರ ಸಂಬಂಧಿ ಗುರಿಗಳು.
ಇದೇ ತಿಂಗಳು ಅಕ್ಟೋಬರ್ 31 ರಿಂದ ನವೆಂಬರ್ 12 ರವರೆಗೆ 26 ನೇ ಯುಎನ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ಗ್ಲಾಸ್ಗೋದಲ್ಲಿ ಆರಂಭವಾಗಲಿದೆ. ಈ ಕಾನ್ಫರೆನ್ಸ್ ನ ಮುಖ್ಯ ಉದ್ದೇಶವೇನೆಂದರೆ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವುದು ಹೇಗೆ ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರುವುದು ಎಂಬುದಾಗಿದೆ. ಸೌದಿ ಗ್ರೀನ್ ಇನಿಶಿಯೇಟಿವ್ ಮಾರ್ಚ್ನಲ್ಲಿಯೇ ಈ ಕಾನ್ಫರೆನ್ಸ್ ಬಗ್ಗೆ ಘೋಷಿಸಿತ್ತು.
ಸೌದಿ ಅರೇಬಿಯಾ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದವು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಸರಾಸರಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುವುದನ್ನು ತಡೆಯುವುದು ಜಾಗತಿಕ ಪ್ರಯತ್ನಗಳ ಅಡಿಯಲ್ಲಿ ಪ್ರತಿ ಸರ್ಕಾರಗಳ ಗುರಿಯಾಗಬೇಕು ಎಂದು ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್, ಐರೋಪ್ಯ ಒಕ್ಕೂಟ ಮತ್ತು ಸೌದಿ ಅರೇಬಿಯಾ 2030 ರ ವೇಳೆಗೆ 30% ರಷ್ಟು ಮೀಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿವೆ.
ಸೌದಿ ಅರೇಬಿಯಾ 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿ ಮೂಲದ ಉತ್ಪಾದನೆಯನ್ನು 50% ಹೆಚ್ಚಿಸುವುದಾಗಿ ಮತ್ತು ಮರುಭೂಮಿ ರಾಜ್ಯದಲ್ಲಿ ಶತಕೋಟಿ ಮರಗಳನ್ನು ನೆಡುವುದು ಸೇರಿದಂತೆ ಇತರೆ ಪರಿಸರ ಸ್ನೇಹಿ ಪ್ರತಿಜ್ಞೆ ಮಾಡಿರುವುದಾಗಿ ಯುಎಸ್ ಹವಾಮಾನ ಪ್ರತಿನಿಧಿ ಜಾನ್ ಕೆರ್ರಿ ಹೇಳಿದ್ದಾರೆ.