Tuesday, August 9, 2022

Latest Posts

ಕನ್ನಡ ಉಳಿಸಿ ಬೆಳೆಸುವ ಜವಾಬ್ಧಾರಿ ಎಲ್ಲರದು: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಹೊಸದಿಗಂತ ವರದಿ,ಚಿತ್ರದುರ್ಗ

ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ಜೊತೆಯಾಗಿ ದುಡಿಯೋಣ, ಜೊತೆಯಾಗಿ ಬೆಳೆಸೋಣ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದ ಅವರು, ಕನ್ನಡ ಎಂದರೆ ಪ್ರೀತಿ, ಕೀರ್ತಿ, ಶಕ್ತಿ, ಗೌರವ, ಹೆಮ್ಮೆ, ಹಿರಿಮೆ, ಉಸಿರಾಗಿದ್ದು, ಇದನ್ನು ಉಳಿಸಿ ಬೆಳೆಸೋಣ. ಕವಿ ನಿಸಾರ್ ಅಹಮದ್ ಹೇಳುವಂತೆ ಕನ್ನಡ ಉತ್ಸವ, ನಿತ್ಯೋತ್ಸವ ಆಗಲಿ ಎಂದು ಶುಭ ಕೋರಿದರು.
ಹಿಂದಿ ಭಾಷೆ ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಲಭಿಸಿದೆ. ಇದು ಕನ್ನಡ-ಕರ್ನಾಟಕದ ಶ್ರೀಮಂತಿಕೆ ಶ್ರೇಷ್ಠತೆಯನ್ನು ತೋರುತ್ತದೆ. ಕಲ್ಯಾಣ ಕರ್ನಾಟಕ-ಕಿತ್ತೂರು ಕರ್ನಾಟಕದ ಮೂಲಕ ನಮ್ಮ ಸರ್ಕಾರ ಕನ್ನಡ ಕಂಪನ್ನು ಹೆಚ್ಚಿಸಿದೆ. ಸರ್ಕಾರದಿಂದ ಮಾತಾಡ್ ಮಾತಾಡ್ ಕನ್ನಡ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಕನ್ನಡ ಉಳಿಸಿ ಬೆಳೆಸಲು ನಾವು ಬದ್ಧ ಎಂದು ಹೇಳಿದರು.
ಯಾವುದೇ ಆಚರಣೆ ಆಗಲಿ, ಹಬ್ಬವಾಗಲಿ ಅದರದ್ದೇ ಆದ ಮಹತ್ವ, ವಿಶೇಷತೆ, ಹಿರಿಮೆ, ಗರಿಮೆಗಳು ಇರುತ್ತವೆ ಹಾಗೆಯೇ ಒಂದು ಹಬ್ಬ ಎಂದರೆ ಅದರ ಹಿಂದೆ ಹಲವು ದಂತಕಥೆಗಳೂ ಇರುತ್ತವೆ. ಇಂತಹ ದಂತಕಥೆಗಳ ಯಶೋಗಾಥೆಯೇ ನಮ್ಮ ಏಕೀಕರಣ ಚಳುವಳಿ ಮತ್ತು ಅಖಂಡ ಕರ್ನಾಟಕ ರಚನೆ ಎಂದು ಹೇಳಿದರು. ಕನ್ನಡ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಹೋರಾಟ, ಕಿಚ್ಚು, ಸ್ವಾಭಿಮಾನ, ಅಭಿಮಾನಗಳ ದಂತಕಥೆಗಳನ್ನು ಸ್ಮರಿಸಿದರು.
ಆರ್.ಹೆಚ್.ದೇಶಪಾಂಡೆಯವರ ಹೋರಾಟ, ಆಲೂರು ವೆಂಕಟರಾಯರ ಕಿಚ್ಚು, ನಿಜಲಿಂಗಪ್ಪನವರ ಸ್ವಾಭಿಮಾನ ಹಾಗೂ ಜೆ.ಹೆಚ್.ಪಟೇಲರ ಕನ್ನಡ ಪ್ರೀತಿ ಅಭಿಮಾನದ ದಂತಕಥೆಗಳನ್ನು ಸಚಿವರು ಸ್ಮರಿಸಿದರು. ಬೆಳಗಲ್ ರಾಮರಾಯರಿಂದ ಹಿಡಿದು ಡೆಪ್ಯೂಟಿ ಚನ್ನಬಸಪ್ಪ, ಕಾರ್ನಾಡ್ ಸದಾಶಿವರಾವ್‌ವರೆಗೆ, ಕುವೆಂಪುರಿಂದ ಕಾರಂತರವರೆಗೆ ಈ ಚಳುವಳಿ ಹಾಗೂ ಕನ್ನಡ ಕೃಷಿ ಮಾಡಿದ ಎಲ್ಲರನ್ನೂ ಸ್ಮರಿಸುತ್ತೇನೆ. ಕನ್ನಡ ರಕ್ಷಣೆಗೆ ನಿಂತ ಪ್ರತಿ ಕನ್ನಡಿಗ, ಕನ್ನಡ ಶಿಕ್ಷಕ ಹಾಗೂ ಸಾಹಿತ್ಯ ಲೋಕ, ಸಿನಿಮಾ ಲೋಕದ ಪ್ರತಿಯೊಬ್ಬರನ್ನು ಅವರ ಕನ್ನಡ ಸೇವೆಗೆ ಒಬ್ಬ ಕನ್ನಡ ವಿದ್ಯಾರ್ಥಿಯಾಗಿ ಸ್ಮರಿಸುತ್ತೇನೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ : ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಎಚ್.ಲಿಂಗಪ್ಪ, ಧನಂಜಯ ಮೆಂಗಸಂದ್ರ, ಡಾ.ಪಿ.ಬಿ.ಶಿವಣ್ಣ. ಕಲಾವಿದರ ಕ್ಷೇತ್ರದಲ್ಲಿ ನೇಹ ಮಲ್ಲೇಶ್, ಎಂ.ಬಿ.ಬೋರಯ್ಯ. ಪತ್ರಿಕೋದ್ಯಮದಲ್ಲಿ ರವಿಕುಮಾರ್ ಎಸ್.ಬಿ., ಆಲೂರು ಹನುಮಂತರಾಯಪ್ಪ. ಸಮಾಜಸೇವೆಯಲ್ಲಿ ಗಾಯತ್ರಿ ಶಿವರಾಮ್, ಈ.ಅರುಣ್ ಕುಮಾರ್, ಎಸ್.ಷಣ್ಮುಖಪ್ಪ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎಂ.ಎಚ್.ರಘುನಾಥರೆಡ್ಡಿ. ಕ್ರೀಡಾ ಕ್ಷೇತ್ರದಲ್ಲಿ ಎಂ.ಅನಿತಾ ಮಹಂತೇಶ್ (ಟೈಕ್ವೊಂಡೋ), ಯಶಸ್ ಪಿ (ಕ್ಯೂಬ್ ಮಸೈಕ್). ಯೋಗದಲ್ಲಿ ಎಸ್.ಆರ್.ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ನಗರಸಭೆ ಅಧ್ಯಕ್ಷ ಬಿ.ತಿಪ್ಪಮ್ಮ. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಲವು ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಆಹಾರ ಮೇಳದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿಜೇತ ಸಂಘಗಳ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಗೌರವಿಸಿದರು.
ವಿವಿಧ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss