Tuesday, June 28, 2022

Latest Posts

ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ: ವರದಿ ಪರಿಗಣನೆ ಮುನ್ನ ಪರಿಶೀಲಿಸಲು ಹೈ ಕೋರ್ಟ್ ನಿರ್ದೇಶನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ವರದಿ, ಮಡಿಕೇರಿ:

ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಡಗದ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅಧ್ಯಯನ ವರದಿಯನ್ನು ಪರಿಗಣಿಸುವ ಮೊದಲು ಸೂಕ್ತ ಮಾನದಂಡಗಳನ್ನು ಅನುಸರಿಸಿ ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಉಚ್ಛ ನ್ಯಾಯಾಲಯ, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಕೊಡವ ಸಮುದಾಯಕ್ಕೆ ಎಸ್ ಟಿ ಟ್ಯಾಗ್ ನೀಡುವ ಸಂಬಂಧ ನಡೆದ ಅಧ್ಯಯನಕ್ಕೆ ರಾಜ್ಯ ಬುಡಕಟ್ಟು
ಸಂಶೋಧನಾ ಸಂಸ್ಥೆ ನೀಡಿರುವ ಪ್ರಶ್ನಾವಳಿ ಮತ್ತು ಅರ್ಜಿ ನಮೂನೆಯನ್ನು ರದ್ದಪಡಿಸಬೇಕೆಂದು ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ ಸಿ) ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ನಿರ್ದೇಶನ ನೀಡಿದೆ.

ಕೊಡವ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಿ ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯನ್ನು ಸರ್ಕಾರದ ಪರಿಶೀಲನೆಗಾಗಿ ಇಡಲಾಗಿದೆ. ಆದರೆ, ಸೂಕ್ತ ಮಾನದಂಡ ಅನುಸರಿಸಿ ಅಧ್ಯಯನ ನಡೆಸಿಲ್ಲ ಎಂದು ಸಂಘಟನೆ‌ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಚಾರದಲ್ಲಿ ಕೇವಲ ಈ ವರದಿ ಆಧರಿಸಿ ಸರಕಾರ ತೀರ್ಮಾನ ಕೈಗೊಳ್ಳಬಾರದು. ವರದಿಯನ್ನು ಒಪ್ಪುವ ಮುನ್ನ, ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಕುರಿತಾಗಿ ಅಧ್ಯಯನ
ನಡೆಸಲು 2016ರ ಡಿ.1ರಂದು ಹೊರಡಿಸಿದ ಆದೇಶದಲ್ಲಿ ವಿಧಿಸಿದ್ದ ಷರತ್ತು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಅಧ್ಯಯನ ನಡೆಸಲಾಗಿದೆಯೇ ಎಂದು ಸರ್ಕಾರ ಪರಿಶೀಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಅಲ್ಲದೆ, ಅಧ್ಯಯನ ಕುರಿತು ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಬೇಕು.
ಒಂದೊಮ್ಮೆ ಸೂಕ್ತ ಮಾನದಂಡ ಅನುಸರಿಸಿ ಅಧ್ಯಯನ ನಡೆಸಿಲ್ಲ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದರೆ,ಹೊಸದಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸುವುದಕ್ಕೆ ಆದೇಶಿಸಲು ಸರ್ಕಾರ ಮುಕ್ತವಾಗಿದೆ ಎಂದು ತಿಳಿಸುವುದರೊಂದಿಗೆ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ವಾದ ಮಂಡಿಸಿ, ಐದು ಮುನ್ನ ಆಧಾರದ ಮೇಲೆ ಅಧ್ಯಯನ ನಡೆಸಲು ಸರ್ಕಾರ ಆದೇಶಿತ್ತು.ಆದರೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಅಧ್ಯಯನದ ವೇಳೆ ಸೂಕ್ತ ಮಾನದಂಡ ಅನುಸರಿಸಿಲ್ಲ. ಅಧ್ಯಯನ ವೇಳೆ ಸಿದ್ಧಪಡಿಸಿದ ಪ್ರಶ್ನಾವಳಿಯೂ ಸಮಂಜಸವಾಗಿರಲಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಮಾನದಂಡದ ಮೇಲೆ ಅಧ್ಯಯನ ನಡೆಸಲಾಗಿದೆ. ಆದರೆ, ಜನಾಂಗೀಯ ಅಧ್ಯಯನ ನಡೆಸಬೇಕಿತ್ತು. ಹೀಗಾಗಿ, ಸಲ್ಲಿಕೆಯಾಗಿರುವ ವರದಿ ಪರಿಗಣಿಸದಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು
ನ್ಯಾಯಪೀಠವನ್ನು ಕೋರಿದರು.

ಆದರೆ ನ್ಯಾಯಪೀಠವು, ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತಲ್ಲದೆ, ವರದಿ ಪರಿಶೀಲನೆ ವೇಳೆ ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss