ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶ: ಬಳ್ಳಾರಿಯಲ್ಲಿ ಕಮಲ ಕಲರವ

ಹೊಸದಿಗಂತ ವರದಿ, ಬಳ್ಳಾರಿ:

ನಗರದ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಬಳಿಯ ಜಿ-ಸ್ಕ್ವಾಯರ್ ಆವರಣದಲ್ಲಿ ನ.20 ರಂದು ಬೆಳಿಗ್ಗೆ ಬಿಜೆಪಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡಗಳ ಜನಶಕ್ತಿ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆ ಬಳ್ಳಾರಿ ನಗರ ಸಂಪೂರ್ಣ ಕೇಸರಿಮಯವಾಗಿದೆ. ಐತಿಹಾಸಿಕ ಸಮಾವೇಶದ ಸಿದ್ದತೆ ಬಹುತೇಕ ಪೂರ್ಣಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಅನೇಕ ಗಣ್ಯರು, ಸಚಿವ ಸಂಪುಟದ ಸದಸ್ಯರು ಸಾಕ್ಷೀಯಾಗಲಿದ್ದಾರೆ.
ನಗರದ ಎಸ್ಪಿ ವೃತ್ತ, ರಾಯಲ್ ವೃತ್ತ, ಮೋತಿ ವೃತ್ತ, ಸಂಗಮ್ ವೃತ್ತ ಸೇರಿದಂತೆ ನಗರದ ಬಹುತೇಕ ಎಲ್ಲ ವೃತ್ತಗಳಲ್ಲಿ ಬಿಜೆಪಿ ಬಾವುಗಳು, ಗಣ್ಯರಿಗೆ ಸ್ವಾಗತ ಕೋರುವ ಕಟೌಟಗಳು ರಾರಾಜಿಸುತ್ತಿದ್ದು, ನೋಡುಗರ ಗಮನಸೆಳೆದಿವೆ. ನಗರದ ಡಾ.ರಾಜ್ ಕುಮಾರ್ ರಸ್ತೆ, ಇನ್ಫಾಂಟ್ರಿ ರಸ್ತೆ, ಜಿಲ್ಲಾದಿಕಾರಿ ಕಚೇರಿ ಮುಖ್ಯರಸ್ತೆ, ಸೇರಿದಂತೆ ನಗರದ ಎಲ್ಲ ಮುಖ್ಯರಸ್ತೆಗಳಲ್ಲಿ ಬಿಜೆಪಿ ಬಾವುಟ ರಾರಾಜಿಸುತ್ತಿದ್ದು, ನಗರ ಸಂಪೂರ್ಣ ಕೇಸರಿಮಯವಾಗಿದೆ.
130ಎಕರೇ ಪ್ರದೇಶದಲ್ಲಿ ಸಮಾವೇಶ: ನಗರದ ಜಿ-ಸ್ಕ್ವಾಯರ್ ಪ್ರದೇಶದ ಸುಮಾರು 130 ಎಕರೆ ಪ್ರದೇಶದಲ್ಲಿ ಬಿಜೆಪಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶವನ್ನು ಆಯೋಜಿಸಲಾಗಿದೆ. 440*800 ಅಡಿ ಅಳತೆಯ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. 40*60 ಅಡಿಯಲ್ಲಿ ಗಣ್ಯರ ವೇದಿಕೆ, 120*40ಅಡಿಗಳ ಮುಖ್ಯವೇದಿಕೆ ಅಚ್ಚುಕಟ್ಟಾಗಿ ಸಿದ್ದಪಡಿಸಲಾಗಿದೆ. ಸಮಾವೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿದ್ದು, 160 ಕಲಾತಂಡಗಳು ಭಾಗವಹಿಸಲಿವೆ. ಎರಡು ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯವೇದಿಕೆ ಒಳಾಂಗಣದಲ್ಲಿ ನಾನಾ ಕಡೆ ಸುಮಾರು 60ಕ್ಕೂ ಹೆಚ್ಚು ಎಲ್‌ಇಡಿ ಪರದೆಗಳ ವ್ಯವಸ್ಥೆ, ಹೊರಾಂಗಣದಲ್ಲಿ 32 ಎಲ್ ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ನ.20 ರಂದು ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ನಿರಂತರ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 300ಕ್ಕೂ ಹೆಚ್ಚು ಊಟದ ಕೌಂಟರ್ ಗಳನ್ನು ತೆರೆಯಲಾಗಿದೆ. ಸಮಾವೇಶದ ಯಶಸ್ವಿಗೆ ಸುಮಾರು 41 ಸಮೀತಿಗಳನ್ನು ರಚಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಶ್ರಮಿಸಲು ಸಜ್ಜಾಗಿದ್ದಾರೆ. ಸಮಾವೇಶಕ್ಕೆ 8-10 ಸಾವಿರ ಬಸ್ ಗಳು, 20 ಸಾವಿರಕ್ಕೂ ಹೆಚ್ಚು ಕ್ರೂಸರ್ ಗಳು ಸುಮಾರು 10ಸಾವಿರಕ್ಕೂ ಹೆಚ್ಚು ಕಾರ್ ಗಳು ಆಗಮಿಸು ಸಾಧ್ಯತೆ ಇದ್ದು, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ರಕ್ಷಣೆಗಾಗಿ ತಾತ್ಕಾಲಿಕ 25 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಮುಖ್ಯಸ್ಥರಾದ ಡಾ.ಬಿ.ಕೆ.ಸುಂದರ್ ಅವರು ನೇತೃತ್ವ ವಹಿಸಿದ್ದಾರೆ. 10ಆಂಬುಲನ್ಸ್ ವ್ಯವಸ್ಥೆ, 5 ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!