ದಿಗಂತ ವರದಿ ಮಂಡ್ಯ :
ಕೊರೋನಾ ರಣಕೇಕೆ ಹಾಕುತ್ತಿರುವ ಸಮಯದಲ್ಲಿ ಅಕ್ಷರ ಕಲಿಸುವ ಶಾಲೆ ಇದೀಗ ಜನರ ಆರೋಗ್ಯ ಕಾಪಾಡುವ ಕೇಂದ್ರವಾಗಿ ರೂಪಾಂತರಗೊಂಡಿದೆ. ಶಾಲೆಯ ಕೊಠಡಿಗಳು ಹೊರರೋಗಿಗಳಿಗೆ ಚಿಕಿತ್ಸೆ, ಪ್ರಯೋಗಾಲಯ, ಔಷಧಾಲಯ, ಚುಚ್ಚುಮದ್ದು ನೀಡುವ, ಕೋವ್ಯಾಕ್ಸಿನ್ ಸಂಗ್ರಹಿಸುವ ಕೇಂದ್ರಗಳಾಗಿ ಬದಲಾಗಿವೆ. ಹೊರರೋಗಿಗಳು ಹಾಗೂ ತುರ್ತು ಚಿಕಿತ್ಸೆ ಬರುವವರಿಗೆ ತೊಂದರೆಯಾಗದಂತೆ ವೈದ್ಯರು ಚಿಕಿತ್ಸೆ ನೀಡಲು ಆರಂಭಿಸಿದ್ದಾರೆ. ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಶಾಲೆಯೊಂದು ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ.
ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಉಸಿರಾಟದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಶೇ.80ರಷ್ಟು ಸೋಂಕಿತರು ಆಕ್ಸಿಜನ್ ಬೇಡಿಕೆಯೊಂದಿಗೆ ದಾಖಲಾಗಲು ಬರುತ್ತಿದ್ದಾರೆ. ಇದರಿಂದ ಮಿಮ್ಸ್ ಆಸ್ಪತ್ರೆ ಮೇಲೆ ಬೀಳುತ್ತಿರುವ ಒತ್ತಡವನ್ನು ಕಡಿಮೆ ಮಾಡಲು 30 ಹಾಸಿಗೆ ಸಾಮರ್ಥ್ಯದ ಕೀಲಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಸೋಂಕಿತರ ಆಕ್ಸಿಜನ್ ಆಸ್ಪತ್ರೆಯನ್ನಾಗಿ ಬದಲಾಯಿಸಲಾಗಿದೆ.
ಇದೇ ವೇಳೆ ಹೊರರೋಗಿಗಳಿಗೆ ಹಾಗೂ ತುರ್ತು ಚಿಕಿತ್ಸೆಗಾಗಿ ಬರುವ ಜನರಿಗೆ ತೊಂದರೆಯಾಗದಂತೆ ಗ್ರಾಮಸ್ಥರ ಸಮ್ಮತಿ ಮೇರೆಗೆ ಊರಿನಲ್ಲಿರುವ ಉನ್ನತೀಕರಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿರುವುದರಿಂದ ಈ ಶಾಲೆಯನ್ನು ಆರೋಗ್ಯ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.
ಆರು ಕೊಠಡಿಗಳಲ್ಲಿ ವ್ಯವಸ್ಥೆ:
ಶಾಲೆಯಲ್ಲಿರುವ ಒಟ್ಟು ಕೊಠಡಿಗಳಲ್ಲಿ ಆರು ಕೊಠಡಿಗಳನ್ನು ಆರೋಗ್ಯ ಕೇಂದ್ರದ ವ್ಯವಸ್ಥೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಒಂದು ಕೊಠಡಿಯಲ್ಲಿ ಔಷಧ ದಾಸ್ತಾನು ಮಾಡಿದ್ದರೆ, ಒಂದು ಕೊಠಡಿಯನ್ನು ಹೊರರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಮೀಸಲಿಡಲಾಗಿದೆ. ಮತ್ತೊಂದು ಕೊಠಡಿಯಲ್ಲಿ ಲ್ಯಾಬ್, ಇಸಿಜಿ ವ್ಯವಸ್ಥೆ, ಇನ್ನೊಂದು ಕೊಠಡಿಯನ್ನು ಚುಚ್ಚುಮದ್ದು ನೀಡುವ ಕೇಂದ್ರವನ್ನಾಗಿ, ಮಗದೊಂದು ಕೊಠಡಿಯಲ್ಲಿ ಎಲ್ಎಲ್ಆರ್ ಯಂತ್ರ ಸೇರಿದಂತೆ ಇನ್ನಿತರ ಸೇವೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ಕೊಠಡಿಯನ್ನು ಖಾಲಿ ಉಳಿಸಿಕೊಳ್ಳಲಾಗಿದೆ.