ದಿಗಂತ ವರದಿ ಮಂಡ್ಯ:
ವಿಜ್ಞಾನದ ಅವಿಷ್ಕಾರಗಳಿಂದ ಮಾತ್ರ ವಿಶ್ವ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ನಗರದ ಅಭಿನವ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ನ್ಯೂಟಾನಿಯನ್ ಟೆಲಿಸ್ಕೋಪ್ ನಿಂದ ಆಕಾಶ ವೀಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಪ್ರಪಂಚದ ನಾನಾದೇಶಗಳು ಸಾಧನೆ ಮಾಡುತ್ತಿವೆ. ಭಾರತ ದೇಶವು ಕೂಡ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ವಿಜ್ಞಾನವು ಪ್ರಮುಖ ಕೇಂದ್ರವಾಗಿದೆ ಎಂದರು.
ವಿಜ್ಞಾನವಿಲ್ಲದೆ ಪ್ರಂಪಚವೇ ಶೂನ್ಯ ಇದ್ದಂತೆ ವಿಜ್ಞಾನದಿಂದ ಎಲ್ಲವನ್ನೂ ಮನುಷ್ಯ ಪಡೆದುಕೊಳ್ಳುತ್ತಿದ್ದಾನೆ. ಅವಿಷ್ಕಾರ ಮಾಡಿ ಅಭಿವೃದ್ಧಿ ಹೊಂದಲು ಮುಂದಾಗಿದ್ದಾನೆ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ ಹೊಸ ಹೊಸ ಅವಿಷ್ಕಾರ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ಕೌಶಲ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.