Wednesday, June 29, 2022

Latest Posts

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಳ್ಳರಲ್ಲ, ಬದಲಿಗೆ ಕ್ರೂರ ಮೃಗ: ಮಳಲಿಯಲ್ಲಿ ಚಿರತೆ… ಭಯದಲ್ಲಿ ಜನತೆ!

ಹೊಸ ದಿಗಂತ ವರದಿ ಕುಪ್ಪೆಪದವು:

ಗಂಜಿಮಠ ಸಮೀಪದ ಮಳಲಿಯಲ್ಲಿ ಚಿರತೆಯೊಂದು ಅಡ್ಡಾಡುತ್ತಿರುವುದು ಇಲ್ಲಿನ ಮನೆ ಯೊಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,  ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ.

ಕಳ್ಳರಿಗಾಗಿ ಹುಡುಕಿದರೆ ಸಿಕ್ಕಿದ್ದು ಚಿರತೆ
ಮಳಲಿಯ ನಾರ್ಲಪದವು ಎಂಬಲ್ಲಿ ಸದಾಶಿವ ಸಾವಂತ್ ಅವರ ಮನೆಗೆ ಮಾರ್ಚ್ ೨೬ರಂದು ಹಾಡಹಗಲೇ ಕಳ್ಳರು ದರೋಡೆ ನಡೆಸಿದ್ದರು. ನಂತರ ಸಾವಂತ್ ಅವರು ತಮ್ಮ ಮನೆಯಲ್ಲಿ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ, ಕಳೆದ ಸೋಮವಾರ ರಾತ್ರಿ ಚಿರತೆ ಇವರ ಮನೆಯ ಸುತ್ತ ಅಡ್ಡಾಡುತ್ತಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಬೋನು ಇಟ್ಟರೂ ಬಂಧಿಯಾಗಿಲ್ಲ!
ಮಳಲಿ ಸುತ್ತಮುತ್ತ  ಚಿರತೆ ಅಡ್ಡಾಡುತ್ತಿರುವ  ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಅರಣ್ಯ ಇಲಾಖೆ  ನಾರ್ಲ ಮತ್ತು ಪದವು ಸೇರಿದಂತೆ ಒಂದೆರಡು ಸ್ಥಳಗಳಲ್ಲಿ ಬೋನುಗಳನ್ನು ಇಟ್ಟು ಚಿರತೆಯನ್ನು  ಬಂಧಿಸಲು ಪ್ರಯತ್ನಿಸಿದ್ದರೂ, ಇಲಾಖೆಯ ಕೈಗೆ ಸಿಗದೇ ತಪ್ಪಿಸುತಿತ್ತು. ಇದೀಗ ಸಾವಂತ್ ಅವರ ಮನೆಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕತ್ತಲಾಗುತ್ತಿದ್ದಂತೆ ಜನ ಓಡಾಡಲು ಭಯಪಡುತ್ತಿದ್ದಾರೆ ಚಿರತೆ ಸೆರೆ ಹಿಡಿಯಬೇಕೆಂದು ಇಲಾಖೆಯನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ?
ಮಳಲಿ ಪರಿಸರದಲ್ಲಿ ಚಿರತೆ ಇರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ನಂತರ ಇಲಾಖೆ ಬೋನು ತಂದಿಟ್ಟು ಸುಮ್ಮನಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಗಂಭೀರ ಪ್ರಯತ್ನವನ್ನೇ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತ್ತೀಚಿಗೆ ರಾತ್ರಿ 8 ಗಂಟೆ ಸುಮಾರಿಗೆ ಮನೆಯೊಂದರ ಅಂಗಳದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮನೆಯ ಜಗಲಿಯಲ್ಲಿ ಮಗು ಕುಳಿತಿತ್ತು, ಅದೇ ಸಮಯಕ್ಕೆ   ಮಗುವಿನ ತಾಯಿ ಹೊರಗಡೆ ಬಂದಿ
ದ್ದರಿಂದ ಚಿರತೆ ಭಯಕ್ಕೆ ಬಿದ್ದು ಅಲ್ಲಿಂದ ಓಡಿತ್ತು.

ಜನರಲ್ಲಿ ಭಯದ ವಾತಾವರಣ ಇದೆ
ಮಳಲಿ ಪರಿಸರದಲ್ಲಿ  ಅಡ್ಡಾಡುತ್ತಿರುವ ಚಿರತೆಯಿಂದಾಗಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.  ಚಿರತೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಆದುದ್ದರಿಂದ ಅರಣ್ಯ ಇಲಾಖೆ ಚಿರತೆಯನ್ನು  ಸೆರೆ ಹಿಡಿಯಬೇಕು ಎನ್ನುತ್ತಾರೆ ಸ್ಥಳೀಯ ಮುಖಂಡರಾದ ಚಂದ್ರಹಾಸ್ ಶೆಟ್ಟಿ ನಾರಳ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss