ಪೊಲೀಸ್ ಠಾಣೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, 144ಸೆಕ್ಷನ್‌ ಜಾರಿ

ಹೊಸದಿಗಂತ ವರದಿ ಹುಬ್ಬಳ್ಳಿ: 

ಮಸೀದಿಯ ಚಿತ್ರದ ಮೇಲೆ ಕೇಸರಿ ಧ್ವಜ ಹಾರಿಸಿದ ವಿಡಿಯೋ ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದ ಎಂಬ ಕಾರಣಕ್ಕೆ ಕೆಲವು ಕಿಡಿಗೇಡಿಗಳು ಪೊಲೀಸ್ ಠಾಣೆ ಸೇರಿದಂತೆ ಹಲವು ಕಡೆ ಕಲ್ಲು ತೂರಾಟ ನಡೆಸಿದ್ದರು. ಈ ಕೃತ್ಯವೆಸಗಿದ 32 ದುಷ್ಕರ್ಮಿಗಳನ್ನು ಹಳೆ ಹುಬ್ಬಳ್ಳಿ ಪೊಲೀಸರು ಭಾನುವಾರ ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ.

ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್‌, ಹಿಂದೂ ಸಾಮ್ರಾಟ್‌’ ಎಂದು ಚಿತ್ರದ ಮೇಲೆ ಬರೆಯಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಅಭಿಷೇಕ್‌ ಹಿರೇಮಠ ಎಂಬವನನ್ನೂ ಪೊಲೀಸರು ಬಂಧಿಸಿದ್ದಾರೆ.

ಘಟನೆ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದರು ಜನ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಗುಂಪು ಚದುರಿಸಲು  ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಮನೆ, ದೇವಸ್ಥಾನ ಮತ್ತು ಪೊಲೀಸ್ ವಾಹನಗಳು ಜಖಂ ಆಗಿವೆ. ಪರಿಸ್ಥಿತಿ ನಿಯಂತ್ರಿಸಲು 144 ಸೆಕ್ಷನ್ ಜಾರಿಯಾಗಿದೆ.

ಗಾಯಗೊಂಡ ಕಾನ್‌ಸ್ಟೆಬಲ್ ಗುರುಪಾದಪ್ಪ ಸ್ವಾದಿ, ಪೂರ್ವ ಸಂಚಾರ ಇನ್‌ಸ್ಪೆಕ್ಟರ್ ಕಾಡದೇವರಮಠ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಪ್ರಮುಖ ಧಾರ್ಮಿಕ ಸ್ಥಳಗಳ ಎದುರು ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಭಾನುವಾರ ರಜೆ ಮೇಲೆ ಹೋದ ಸಿಬ್ಬಂದಿಗೂ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!