ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರೋತ್ಸಾಹ ನೀಡಿದ ಸಿಎಂಗೆ ಸಚಿವ ನಿರಾಣಿ ಶ್ಲಾಘನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೇಂದ್ರ ಸರಕಾರದ ಬಹುನಿರೀಕ್ಷಿತ ಭಾರತ್ ಅಭಿಯಾನದ ಯೋಜನೆಯಡಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರಕಾರ ಬಜೆಟ್‌ನಲ್ಲಿ ವಿಶೇಷ ಪ್ರೋತ್ಸಾಹ ನೀಡಿರುವುದು ಸ್ವಾಗತಾರ್ಹ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ಶ್ಲಾಘಿಸಿದ್ದಾರೆ.

2022-23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರಕಾರದ 76 ಸಾವಿರ ಕೋಟಿ ರೂ. ವೆಚ್ಚದ ಸೆಮಿಕಂಡಕ್ಟರ್ ಯೋಜನೆಯ ಗರಿಷ್ಠ ಲಾಭವನ್ನು ರಾಜ್ಯ ಸರಕಾರ ಪಡೆದುಕೊಳ್ಳಲಿದ್ದು, ಸೆಮಿಕಂಡಕ್ಟರ್ ತಯಾರಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯವಾದ ನೆರವು ನೀಡಲಿದೆ ಎಂದಿರುವುದು ಸಂತಸವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ವಾಸ್ತವಿಕತೆಯಿಂದ ಕೂಡಿದ್ದು, ಕಾಲಮಿತಿಯೊಳಗೆ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ. 2021ರ ನವೆಂಬರ್ ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತ ಮಾಡಲಾಯಿತು. ಪ್ರಸ್ತುತ ಬಜೆಟ್‍ನಲ್ಲಿ ದರ ಹೆಚ್ಚಳ ಮಾಡದೆ ಸಮತೋಲನ ಬಜೆಟ್ ಮಂಡಿಸಿದ್ದಾರೆ ಎಂದು ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಬಜೆಟ್ ಅಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರಾಣಿ, ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರು ಉದ್ಯಮಶೀಲರಾಗುವುದನ್ನು ಉತ್ತೇಜಿಸಲು ಕೆಐಡಿಬಿ ,ಕೆಎಸ್‍ಐಡಿಸಿ ಸಂಸ್ಥೆಗಳನ್ನು ಸ್ಥಾಪಿಸುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಹಣ ಸಹಾಯ ಮಾಡುವ ಆಶ್ವಾಸನೆಯನ್ನು ಪ್ರಕಟಿಸಲಾಗಿದೆ. ರಾಜ್ಯ ಸರಕಾರವು ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಿದ್ದು, ದೇಶದಲ್ಲಿ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ಜಾರಿ ಮಾಡಲಾಗಿದೆ. ಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ.

ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಾದ ಜವಳಿ, ಆಟಿಕೆ ತಯಾರಿಕೆ, ಎಫ್‍ಎಂಸಿಜಿ, ಚರ್ಮ ಉತ್ಪನ್ನಗಳು, ಆಹಾರ ಸಂಸ್ಕರಣೆ, ಆಭರಣಗಳ ಮೇಲೆ ಹೆಚ್ಚಿನ ಒತ್ತು ನೀಡಿ ಹೂಡಿಕೆದಾರರನ್ನು ಆಕರ್ಷಿಸಲಾಗುವುದು. ಚೆನ್ನೈ-ಬೆಂಗಳೂರು-ಮುಂಬೈ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ, ದಾವಣಗೆರೆ, ಹಾವೇರಿ ಮತ್ತು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು, ಕೈಗಾರಿಕಾ ವಸಾಹತು ಸ್ಥಾಪನೆ, ಕಾರ್ಯಾಚರಣೆ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕರ್ನಾಟಕ ವಿಶೇಷ ಹೂಡಿಕೆ ನಿಯಮ ರಚಿಸಲಾಗುವುದು. ಮೊದಲ ಹಂತವಾಗಿ ತುಮಕೂರು, ಧಾರವಾಡ ಜಿಲ್ಲೆಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಮೆಗಾ ಜ್ಯುವೆಲರಿ ಪಾರ್ಕ್ ಸ್ಥಾಪನೆಯಿಂದ 10 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಸಾಮಾನ್ಯ ಸೌಲಭ್ಯ ಕೇಂದ್ರಗಳು ಮತ್ತು ಇತರ ಮೂಲಸೌಕರ್ಯ ಒಳಗೊಂಡ ಬಹುಮಹಡಿ ಕಾರ್ಖಾನೆ ಕಲ್ಪನೆಯ ಆವಶ್ಯಕ ಪ್ಲೇ ಮೂಲಭೂತ ಸೌಲಭ್ಯಗಳನ್ನು ಬೆಂಗಳೂರು, ಗ್ರಾಮಾಂತರ, ಬೆಳಗಾವಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕೇಂದ್ರ ಸರಕಾರದ ಟೈಸ್ ಯೋಜನೆ ರೂಪಿಸಲು ಕ್ರಮ ವಹಿಸುವುದಾಗಿ ಬಜೆಟ್‌ನಲ್ಲಿ ಘೋಷಿಲಾಗಿದೆ. ಇಂಥ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಕೇಂದ್ರದ ಸಹಯೋಗದಲ್ಲಿ ಬೀದರ್‌ನಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಪ್ರಾರಂಭಿಸುವ ಘೋಷಣೆ ಮಾಡಲಾಗಿದೆ. ಧಾರವಾಡದಲ್ಲಿ ಎಫ್‍ಎಂಜಿಸಿ ಕ್ಲಸ್ಟರ್ ಅಭಿವೃದ್ದಿಪಡಿಸಿ ಇದರಡಿ ಬರುವ ಕೈಗಾರಿಕೆಗಳಿಗೆ ವಿಶೇಷ ಸಹಾಯಧನ ಪ್ಯಾಕೇಜ್ ಘೋಷಿಸಲಾಗಿದೆ. ಮುಖ್ಯಮಂತ್ರಿ ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಕೆಐಎಡಿಬಿ ಮತ್ತು ಕೆಎಸ್‍ಎಸ್‍ಐಡಿಸಿ ಸಂಸ್ಥೆಗಳು ಸ್ಥಾಪಿಸುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಸಣ್ಣ ನಿವೇಶನಗಳಲ್ಲಿ ಆದ್ಯತೆ ನೀಡುವ ಪ್ರಸ್ತಾಪದಿಂದ ಕೈಗಾರಿಕೆಗಳಿ ಪ್ರಗತಿಗೆ ಮತ್ತು ಉದ್ಯೋಗ ಸೃಷ್ಟಿಗೂ ನೆರವಾಗಲಿದೆ ಎಂದು ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!