ಹೊಸದಿಗಂತ ವರದಿ,ಮಂಡ್ಯ:
ಜಿಲ್ಲೆಯಲ್ಲಿ ಬಡವರಿಗೆ ಮನೆ ಸಿಗದಿರುವುದಕ್ಕೆ ಅವರು ಅಧಿಕಾರಿಗಳಿಗೆ ಹಣ ಕೊಡದಿರುವುದೇ ಕಾರಣ. ಇಒ, ಪಿಡಿಒಗಳ ಜೇಬು ತುಂಬಿಸದ ಲಾನುಭವಿಗಳಿಗೆ
ಮನೆಯನ್ನೇ ಮಂಜೂರು ಮಾಡುವುದಿಲ್ಲ. ಈ ರೀತಿ ಬಡವರಿಂದ ಸುಲಿಗೆ ಮಾಡುವವರನ್ನು ಮನೆಗೆ ಕಳುಹಿಸುವಂತೆ ಜಿಪಂ ಸಿಇಓ ಅವರಿಗೆ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಮೃತ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡವರು ಎಲ್ಲಿಂದ ಹಣ ತಂದುಕೊಡಲು ಸಾಧ್ಯ. ಇಒ, ಪಿಡಿಒಗಳು ಒಂದೊಂದು ಮನೆಗೆ ಒಬ್ಬರಿಂದ ಇಂತಿಷ್ಟು ಹಣವನ್ನು ನಿಗದಿಪಡಿಸಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಮನೆಯನ್ನು ಕೂಡಲೇ ಮಂಜೂರು ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ಮನೆಗಳನ್ನೇ ಕೊಡುತ್ತಿಲ್ಲ. ಇದೇ ಕಾರಣದಿಂದ ಜಿಲ್ಲೆಯಲ್ಲಿ ಇನ್ನೂ ವಸತಿಹೀನರಿರಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಬಡವರಿಗೆ ನಿವೇಶನವಿದ್ದ ಮೇಲೆ ಮನೆ ಕೊಡಲು ಇರುವ ತೊಂದರೆಯಾದರೂ ಏನು. ಇವರು ಹಣ ಕೊಟ್ಟವರಿಗಷ್ಟೇ ಮನೆ ಕೊಡುತ್ತಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತೆ. ಪ್ರಧಾನಿ ನರೇಂದ್ರಮೋದಿ ಎಲ್ಲರಿಗೂ ಸೂರು ಕೊಡಲು ಸಂಕಲ್ಪ ಮಾಡಿದ್ದಾರೆ. ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ, ಅಧಿಕಾರಿಗಳು ಅದನ್ನು ಸಾಕಾರಗೊಳಿಸದೆ ವಿಲಗೊಳಿಸುತ್ತಿದ್ದಾರೆ ಎಂದು ಚಾಟಿ ಬೀಸಿದರು.
ಅಧಿಕಾರಿಗಳು ಬಡವರಿಂದ ಹಣ ಪಡೆಯುವುದಕ್ಕೆ ಮೊದಲು ಕಡಿವಾಣ ಹಾಕಬೇಕು. ಹಣ ಪಡೆಯದೆ ಕೆಲಸ ಮಾಡಬೇಕು. ಯಾರೊಬ್ಬರ ಬಳಿಯೂ ಹಣ ಪಡೆಯಬಾರದು. ಹಣ ಪಡೆದಿರುವುದು ಕಂಡುಬಂದಲ್ಲಿ ಕೂಡಲೇ ಅವರನ್ನು ಮನೆಗೆ ಕಳುಹಿಸಿ.
ಇದಕ್ಕಾಗಿ ವಿಶೇಷ ತಂಡವನ್ನು ರಚಿಸಿ. ಅರ್ಹ ಲಾನುಭವಿಗಳು ವಸತಿ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಸಿಇಓ ದಿವ್ಯಪ್ರಭು ಅವರಿಗೆ ತಿಳಿಸಿದರು.