Friday, August 19, 2022

Latest Posts

ಕೊಡಗಿನಲ್ಲಿ ಸೆ.27 ರಿಂದ 6 ರಿಂದ 8ನೇ ತರಗತಿ ಆರಂಭ: ಜಿಲ್ಲಾಧಿಕಾರಿ ಸೂಚನೆ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಕಡಿಮೆ ಇದ್ದು, ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಹಾಲಿ ಇರುವ ಪಾಸಿಟಿವಿಟಿ ದರವನ್ನು ಗಮನದಲ್ಲಿರಿಸಿಕೊಂಡು ಸರ್ಕಾರದ ಮತ್ತು ಸಂಬಂಧಪಟ್ಟ ಇಲಾಖೆಯ ಸುತ್ತೋಲೆಯನ್ನು ಆಧರಿಸಿ, ಜಿಲ್ಲೆಯಲ್ಲಿ ಸೆ.27ರಿಂದ 6ರಿಂದ 8ನೇ ತರಗತಿಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಅದರಂತೆ ಕೊಡಗು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ 6 ರಿಂದ 8ನೇ ತರಗತಿಗಳನ್ನು ಸಂಬಂಧಪಟ್ಟ ಇಲಾಖೆಯ ಸುತ್ತೋಲೆಯಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಕೋವಿಡ್-19 SOP) ಪಾಲಿಸಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ.
ಹಿಂದುಳಿದ, ಅಲ್ಪ ಸಂಖ್ಯಾತರ, ಸಮಾಜ ಕಲ್ಯಾಣ ಇತ್ಯಾದಿ ಇಲಾಖೆಗಳ ಹಾಸ್ಟೆಲ್ ಗಳ ಅಧಿಕಾರಿ/ ಸಿಬ್ಬಂದಿಗಳು ಕನಿಷ್ಟ ಒಂದು ಕೋವಿಡ್-19 ಲಸಿಕೆ ಪಡೆದಿರತಕ್ಕದ್ದು. ಮೇಲಿನ ಶಾಲೆ, ವಿದ್ಯಾ ಸಂಸ್ಥೆ ಮತ್ತು ಹಾಸ್ಟೆಲ್ ಗಳನ್ನು ನಿಯಮಾನುಸಾರ ಸ್ಯಾನಿಟೈಸ್ ಮಾಡಬೇಕು.
ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕನಿಷ್ಟ ಒಂದು ಕೋವಿಡ್-19 ಲಸಿಕೆ ಪಡೆದಿರಬೇಕು.ವಿದ್ಯಾರ್ಥಿಗಳ ಪಾಲಕರು ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ / ಹಾಸ್ಟೆಲ್ ಗಳಲ್ಲಿ ಒಂದು ಕೊಠಡಿಯನ್ನು ಐಸೋಲೇಶನ್ ಕೊಠಡಿ ಆಗಿ ಕಾಯ್ದಿರಿಸಬೇಕು.ಶಾಲಾ ಕಾಲೇಜು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನದಂತೆ ನಿಯಮಾನುಸಾರ ಸೂಕ್ತ ಕೆ.ಎಸ್.ಆರ್.ಟಿ.ಸಿ. / ಖಾಸಗಿ ಸಾರಿಗೆ ವ್ಯವಸ್ಥೆ ಬಗ್ಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಈ ಆದೇಶವು ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ನೀಡಲಿದೆ.
ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 1860, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರಡಿ ಮತ್ತು ಸಂಬಂಧಪಟ್ಟ ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!