ಸ್ಟಾಲಿನ್ ಸರ್ಕಾರಕ್ಕೆ ಹಿನ್ನಡೆ: ಚೆಸ್ ಒಲಂಪಿಯಾಡ್ ಜಾಹೀರಾತುಗಳಲ್ಲಿ ರಾಷ್ಟ್ರಪತಿ- ಪ್ರಧಾನಿ ಫೋಟೋ ಹಾಕಲು ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಚೆನ್ನೈನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ ಜಾಹೀರಾತುಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಹಾಕುವಂತೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಆದೇಶಿಸಿದೆ. ಈ ಮೂಲಕ ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

44ನೇ ಚೆಸ್ ಒಲಿಂಪಿಯಾಡ್ ಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದು, ಆಗಸ್ಟ್ 9 ರವರೆಗೆ ಚೆನ್ನೈನಲ್ಲಿ ನಡೆಯಲಿದೆ.
ಈ ಪ್ರತಿಷ್ಠಿತ ಟೂರ್ನಿ ಭಾರತದಲ್ಲಿ ಮೊದಲ ಬಾರಿಗೆ ಹಾಗೂ ಏಷ್ಯಾದಲ್ಲಿ 30 ವರ್ಷಗಳ ಬಳಿಕ ನಡೆಯುತ್ತಿದೆ.ಆದರೆ ಇಂತಹ ಅಂತರಾಷ್ಟ್ರೀಯ ಪ್ರತಿಷ್ಠಿತ ಟೂರ್ನಿ ಭಾರತದಲ್ಲಿ ನಡೆಯುತ್ತಿದ್ದರೂ ಸಹ ಜಾಹೀರಾತುಗಳಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿ ಭಾವಚಿತ್ರಗಳಿಗೆ ಕೊಕ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ರಾಜೇಶ್ ಕುಮಾರ್ ಎಂಬವರು ಮಧುರೈ ಹೈಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ವಾದಿಸಿದ್ದ ಅಡ್ವೊಕೇಟ್ ಜನರಲ್, ಪಂದ್ಯದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಪ್ರಧಾನ ಮಂತ್ರಿ ಕಚೇರಿಯಿಂದ ಈವರೆಗೆ ಯಾವುದೇ ಮಾಹಿತಿ ಬಾರದ ಕಾರಣ ಜಾಹೀರಾತುಗಳಲ್ಲಿ ಅವರ ಫೋಟೋ ಹಾಕಲಾಗಿಲ್ಲ ಎಂದು ಹೇಳಿದ್ದರು.

ಆದರೆ ಇದನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಇಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೂರ್ನಿ ಭಾರತದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ ಭಾವಚಿತ್ರವನ್ನು ಜಾಹೀರಾತುಗಳಲ್ಲಿ ಬಳಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!