ಹಂಪಿ ಕನ್ನಡ ವಿವಿಯಲ್ಲಿ ಎಂ.ಪಿ.ಪ್ರಕಾಶ್ ಅಧ್ಯಯನ ಪೀಠ‌ ಸ್ಥಾಪನೆ:‌ ಸಿಎಂ ಬೊಮ್ಮಾಯಿ ಘೋಷಣೆ

ಹೊಸದಿಗಂತ ವರದಿ, ವಿಜಯನಗರ
ಕನ್ನಡ ಭಾಷೆಗೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಹಾಗೂ ಇನ್ನಿತರ ಚಟುವಟಿಕೆಗಳಿಗೆ ನೆರವು ನೀಡಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ಮುಖ್ಯಮಂತ್ರಿ ವಿವೇಚನಾ ಅನುದಾನದಡಿ 20 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡವುದಾಗಿ ಎಂದು‌ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹಂಪಿ ಬಳಿಯ ಕನ್ನಡ ವಿವಿಯಲ್ಲಿ ನೂತನ ಐದು ಕಟ್ಟಡಗಳ ಉದ್ಘಾಟನೆ, 128 ಪುಸ್ತಕಗಳ ಬಿಡುಗಡೆ ಹಾಗೂ ಸಂಚಾರಿ ವಿವಿ ಪುಸ್ತಕ ಮಾರಾಟ ವಾಹನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿಶ್ವವಿದ್ಯಾಲಯಕ್ಕೆ ಈಗ ಒದಗಿಸಲಾಗುವ ಅನುದಾನ ಬಳಸಿಕೊಂಡು ವಿದ್ಯಾರ್ಥಿಗಳ ಶಿಷ್ಯವೇತನ, ಹೊರಗುತ್ತಿಗೆ ಸಿಬ್ಬಂದಿಗಳ ಬಾಕಿ ವೇತನ ಹಾಗೂ ತುರ್ತು ಅಗತ್ಯ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ನಿರ್ದೇಶಿಸಿದರು.
ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಇನ್ನೀತರ ಚಟುವಟಿಕೆಗಳಿಗಾಗಿ ಕುಲಪತಿ ಡಾ.ಸ.ಚಿ.ರಮೇಶ ಅವರು 80ಕೋಟಿ ರೂ.ಗಳನ್ನು ತುರ್ತು ಒದಗಿಸುವಂತೆ ಬೇಡಿಕೆ ಇಟ್ಟಿದ್ದು, ಈ ಅನುದಾನವನ್ನು ಹಂತಹಂತವಾಗಿ ಜಿಲ್ಲಾ‌ ಖನಿಜ ನಿಧಿ ಮತ್ತು ಸರಕಾರದ ಅನುದಾನಡಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಾ.ಎಂ.ಪಿ.ಪ್ರಕಾಶ ಅಧ್ಯಯನ ಪೀಠ ಸ್ಥಾಪನೆ:
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದ ಹಾಗೂ ಕನ್ನಡ-ಕನ್ನಡ ಸಂಸ್ಕ್ರತಿಗೆ ಶ್ರಮಿಸುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ದಿಂ.ಎಂ.ಪಿ.ಪ್ರಕಾಶ ಅವರ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಸಿ.ಎಂ.ಬೊಮ್ಮಾಯಿ ಅವರು ಘೋಷಿದರು.
ಎಂ.ಪಿ.ಪ್ರಕಾಶ ಅಧ್ಯಯನ ಪೀಠ ಹೇಗಿರಬೇಕು ಮತ್ತು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಯೋಜನಾ ರೂಪುರೇಷೆಗಳನ್ನು ಸಿದ್ದಪಡಿಸಬೇಕು ಎಂದು ಕುಲಪತಿಗಳಿಗೆ ಸೂಚನೆ ನೀಡಿದರು.
ಕನ್ನಡ ವಿವಿ ಸ್ಥಾಪನೆಯಲ್ಲಿ ಎಂ.ಪಿ.ಪ್ರಕಾಶ್ ವಹಿಸಿದ ಪಾತ್ರವನ್ನು ಸಿಎಂ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಬಿಚ್ಚಿಟ್ಟರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ,ಐಟಿ-ಬಿಟಿ,ವಿಜ್ಞಾನ- ತಂತ್ರಜ್ಞಾನ,ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವರ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಮಾತನಾಡಿದರು.
ಸಚಿವರಾದ ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ,ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಸೋಮಶೇಖರ್ ರೆಡ್ಡಿ, ವೈ.ಎಂ.ಸತೀಶ್, ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಎಸ್ಪಿ ಡಾ.ಅರುಣ್ ಎಸ್.ಕೆ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಪ್ರಸಾರಂಗ ವಿಭಾಗದ ನಿರ್ದೇಶಕರಾದ ಡಾ.ಶೈಲಜಾ ಎಂ.ಹಿರೇಮಠ, ವಿವಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್.ನಂಜಯ್ಯನವರ್ ಸೇರಿದಂತೆ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!