ಹೊಸದಿಗಂತ ವರದಿ, ಮಂಗಳೂರು:
ಬಿಜೆಪಿ ಕೇಂದ್ರ ಸಮಿತಿ ಸೂಚನೆಯಂತೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಾಗೂ ಅವರು ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾದ 20ನೇ ವಾರ್ಷಿಕೋತ್ಸವದ ಅಂಗವಾಗಿ ಸೆ.17ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯದಲ್ಲಿ ಸೇವೆ ಹಾಗೂ ಸಮರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಗುರುವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕದ್ರಿ ದೇವಸ್ಥಾನದಲ್ಲಿ ದ.ಕ. ಜಿಲ್ಲಾ ಮಟ್ಟದ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಬಳಿಕ 8 ಗಂಟೆಗೆ ನಂದಿಗುಡ್ಡ ಸ್ಮಶಾನ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು ಆ ಬಳಿಕ 12 ಗಂಟೆಗೆ ಪಂಪ್ವೆಲ್ನಲ್ಲಿ ವಿಶೇಷ ಮಕ್ಕಳ ಜೊತೆಗೂಡಿ `ಚಿನ್ನರೊಂದಿಗೆ ಸಹಭೋಜನ ಕಾರ್ಯಕ್ರಮ ನಡೆಯಲಿದೆ ಎಂದರು.
ಒಟ್ಟು ೨೦ ದಿನಗಳ ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಜೀವನ ಮತ್ತು ಸಾಧನೆಗಳ ಕುರಿತುಭಿತ್ತಿ ಫಲಕಗಳನ್ನು ರಾಜ್ಯ ಮತ್ತು ಜಿಲ್ಲಾ ಕಚೇರಿಗಳಲ್ಲಿ ಏರ್ಪಡಿಸಲಾಗುವುದು. ವರ್ಚುವಲ್ ಕಾರ್ಯಕ್ರಮ ನಡೆಸಲಾಗುವುದು. ದಿವ್ಯಾಂಗರಿಗೆ ನೆರವು ಮತ್ತು ಉಪಯುಕ್ತ ಸಲಕರಣೆ ವಿತರಣೆ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಕೊಳಗೇರಿ, ಅನಾಥಾಶ್ರಮ, ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ ಹಣ್ಣು ವಿತರಿಸಲಾಗುವುದು ಎಂದವರು ತಿಳಿಸಿದರು.
ಪ್ರಧಾನಿಗೆ ಶುಭ ಹಾರೈಸುವ ಮತ್ತು ಬಡವರಿಗಾಗಿ ಅವರು ಕೈಗೊಂಡ ಕಲ್ಯಾಣ ಕಾರ್ಯಗಳಿಗಾಗಿ ಅವರಿಗೆ ಧನ್ಯವಾದ ತಿಳಿಸುವ 5 ಕೋಟಿ ಪೋಸ್ಟ್ ಕಾರ್ಡ್ಗಳನ್ನು ಎಲ್ಲ ದೇಶದ ಎಲ್ಲ ಕಡೆಗಳಿಂದ ರವಾನಿಸಲಾಗುವುದು. ಪ್ರತಿ ಬೂತ್ನಿಂದ ಗರಿಷ್ಠ ಸಂಖ್ಯೆಯಲ್ಲಿ ಪೋಸ್ಟ್ ಕಾರ್ಡ್ಗಳನ್ನು ಬರೆಸಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆಯ ಫಲಾನುಭವಿಗಳಿಗೆ ಪ್ರತಿ ಬೂತ್ನಲ್ಲಿ ಉಚಿತ ಪಡಿತರ ಚೀಲಗಳ ವಿತರಣೆ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್ ತ್ಯಜಿಸಲು ಉತ್ತೇಜಿಸಲು ಬೃಹತ್ ಅಭಿಯಾನ, ಪ್ರತಿಜ್ಞಾವಿಧಿ ಸ್ವೀಕಾರ ನಡೆಸಲಾಗುವುದು ಎಂದು ಕಾರ್ಣಿಕ್ ಹೇಳಿದರು.