ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ತೀವ್ರ ಚಳಿ ಆರಂಭವಾಗಿದೆ. ಚಳಿಗೆ ಮಕ್ಕಳು ಹೆಚ್ಚು ನಲುಗಿದ್ದು, ಸರಿಯಾದ ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಚಳಿಯಿಂದಾಗಿ ದಿನವೂ ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದ್ದು, ಆಸ್ಪತ್ರೆಗೆ ಸೇರಿಸಲು ಪೋಷಕರ ಬಳಿ ಹಣ ಇಲ್ಲದಂತಾಗಿದೆ.
ಚಳಿ ತಡೆಯಲಾಗದೆ ತಾತ್ಕಾಲಿಕ ಶಿಬಿರಗಳಲ್ಲಿ ಮಕ್ಕಳು ಆಶ್ರಯ ಪಡೆದಿದ್ದು, ಅಸ್ವಸ್ಥ ಮಕ್ಕಳು ತಾಯಂದಿರ ಜತೆ ಆಸ್ಪತ್ರೆ ಸೇರಿದ್ದಾರೆ. ತಾಲಿಬಾನಿಗಳ ಕಪಿಮುಷ್ಠಿಗೆ ಆಫ್ಘನ್ ಸಿಕ್ಕಾಗಿನಿಂದ ಇಲ್ಲಿನ ಜನರಿಗೆ ಒಂದು ದಿನವೂ ನೆಮ್ಮದಿ ಇಲ್ಲದಂತಾಗಿದೆ. ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.
ಆಹಾರ ವಿತರಣ ಕೇಂದ್ರಗಳ ಮುಂದೆ ಮಕ್ಕಳು ಸರತಿ ಸಾಲಿನಲ್ಲಿ, ಕೊರೆವ ಚಳಿಯನ್ನೂ ಲೆಕ್ಕಿಸದೆ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ. ತಾಲಿಬಾನ್ ಆಫ್ಘನ್ನನ್ನು ವಶಪಡಿಸಿಕೊಂಡ ನಂತರ ಇಲ್ಲಿನ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಂತಾರಾಷ್ಟ್ರೀಯ ದೇಣಿಗೆಗಳಿಂದಲೇ ಆಫ್ಘನ್ ಕೊಂಚ ಉಸಿರಾಡುತ್ತಿದೆ.
ಈ ಹಿಂದಿನ ಸರ್ಕಾರದ ಬಜೆಟ್ಗೆ ಅಮತಾರಾಷ್ಟ್ರೀಯ ಸಮುದಾಯದಿಂದ ಶೇ,80 ರಷ್ಟು ನೆರವು ಬಂದಿತ್ತು. ಇದೀಗ ಅದೂ ಇಲ್ಲದಂತಾಗಿದೆ. ಇಲ್ಲಿನ ಮಕ್ಕಳು ಆಹಾರವಿಲ್ಲದೆ ಅಪೌಷ್ಠಿಕತೆಗೆ ತುತ್ತಾಗಿದ್ದಾರೆ. ಮಕ್ಕಳಿಗೆ ಸೂಕ್ತ ಆಹಾರ ಕೊಡಿಸುವಷ್ಟು ಅಥವಾ ಆಸ್ಪತ್ರೆಗೆ ಸೇರಿಸುವಷ್ಟು ಹಣವನ್ನು ಪೋಷಕರು ಹೊಂದಿಲ್ಲ. ಪ್ರತಿದಿನವೂ ಸಹಾಯ ಯಾಚಿಸಿ ಸರ್ಕಾರಿ ಸಚಿವಾಲಯಗಳ ಮುಂದೆ ಜನ ಚಳಿಯಲ್ಲಿಯೂ ಕ್ಯೂ ನಿಲ್ಲುತ್ತಿದ್ದಾರೆ.