ಹೊಸ ದಿಗಂತ ವರದಿ, ಕಾಸರಗೋಡು:
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದೆ ಎಂದು ತಿರುವನಂತಪುರದ ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಕೋಟ್ಟಾಯಂ, ಆಲಪ್ಪುಳ ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಷ್ಣತೆ ಅನುಭವಕ್ಕೆ ಬಂದಿದೆ. ಈ ಎರಡು ಜಿಲ್ಲೆಗಳಲ್ಲಿ 2 ರಿಂದ 3 ಡಿಗ್ರಿ ಉಷ್ಣತೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ.
ಕೋಟ್ಟಾಯಂನಲ್ಲಿ 37 ಡಿಗ್ರಿ ಉಷ್ಣತೆ ಕಂಡು ಬಂದಿದ್ದು , ಆಲಪ್ಪುಳದಲ್ಲಿ 36.5 ಡಿಗ್ರಿ ಉಷ್ಣತೆ ದಾಖಲಾಗಿದೆ. ಪಾಲಕ್ಕಾಡು ಜಿಲ್ಲೆಯ ಮುಂಡೂರಿನಲ್ಲಿ ಅತೀ ಹೆಚ್ಚು ಅಂದರೆ 40 ಡಿಗ್ರಿ ಉಷ್ಣತೆ ಕಂಡು ಬಂದಿದೆ ಎಂದು ವರದಿ ತಿಳಿಸಿದೆ. ಕೇರಳದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ ಹಿನ್ನೆಲೆಯಲ್ಲಿ ಸೂರ್ಯತಾಪ ಸಹಿತ ವಿವಿಧ ಅನಾರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆಯಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಈ ನಿಟ್ಟಿನಲ್ಲಿ ಜನರು ಜಾಗ್ರತೆ ಪಾಲಿಸಬೇಕು. ಬಿಸಿಲಲ್ಲಿ ದುಡಿಯುವ ಕಾರ್ಮಿಕರು ಕೆಲಸದ ಅವಧಿಯನ್ನು ಬದಲಾಯಿಸಬೇಕು. ಬೆಳಗ್ಗೆ 11 ರಿಂದ ಅಪರಾಹ್ನ 3ರ ವರೆಗೆ ಸಾಧ್ಯವಾದಷ್ಟು ಬಿಸಿಲಿನಿಂದ ದೂರವಿರಬೇಕು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ 35 ಡಿಗ್ರಿಯಷ್ಟು ಉಷ್ಣತೆ ಕಂಡು ಬಂದಿದೆ. ಈ ಜಿಲ್ಲೆಯಲ್ಲಿ ಸಾರ್ವಜನಿಕರು ಗರಿಷ್ಠ ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆಯು ತಿಳಿಸಿದೆ.