ಲೈಂಗಿಕ ದೌರ್ಜನ್ಯ ಪ್ರಕರಣ: ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು

ಹೊಸದಿಗಂತ ವರದಿ, ಚಿತ್ರದುರ್ಗ

ಡಾ. ಶಿವಮೂರ್ತಿ ಮುರುಘಾ ಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ಅಧಿಕಾರಿಗಳಿಂದ ತನಿಖೆ ಆರಂಭಿಸಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಬಾಲಕಿಯರನ್ನು ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ ಮಾಡಲಾಗಿದೆ. ಭಾನುವಾರ ನಸುಕಿನಲ್ಲಿ ಬಾಲಕಿಯರನ್ನು ಚಿತ್ರದುರ್ಗಕ್ಕೆ ಕರೆತರಲಾಗಿದೆ.
ಡಿವೈಎಸ್‌ಪಿ ಅನಿಲ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖಾ ತಂಡದ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವ ಸಂತ್ರಸ್ತ ಬಾಲಕಿಯರು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಿಜ. ನಮ್ಮನ್ನು ಲೈಂಗಿಕವಾಗಿ ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಕಳೆದ ಮೂರುವರೆ ವರ್ಷಗಳಿಂದ ಈ ನೋವನ್ನು ಅನುಭವಿಸಿಕೊಂಡು ಬಂದಿದ್ದೇವೆ ಎಂದು ಬಾಲಕಿಯರು ತನಿಖಾ ತಂಡದ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆದ ನಂತರ ಬಾಲಕಿಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ತಯಾರಿ ನಡೆಸಲಾಗುತ್ತಿದೆ. ಇಂದು ಭಾನುವಾರ ನ್ಯಾಯಾಲಯಕ್ಕೆ ರಜೆ ಇರುವ ಕಾರಣ ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾಧೀಶರ ನಿವಾಸದಲ್ಲಿ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆಯುವ ಸಾಧ್ಯತೆ ಇದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಬಾಲಕಿಯರು ತಮ್ಮ ಮೇಲೆ ಲೈಂಗಿಕ ನಡೆದಿರುವ ಬಗ್ಗೆ ಮಾಹಿತಿ ನೀಡಿದಲ್ಲಿ ಮುರುಘಾ ಶರಣರಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ.
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ಸಂಸ್ತಸ್ತ ಬಾಲಕಿಯರ ಬಳಿ ದಾಖಲೆಗಳಿವೆ. ಆದರೆ ಅವರಿಗೆ ಜೀವಭಯ ಇರುವ ಕಾರಣ ಬಾಲಕಿಯರು ದಾಖಲೆಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಸಿಬ್ಬಂದಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಶಿವಮೂರ್ತಿ ಮುರುಘಾ ಶರಣರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕಳೆದ ೨-೩ ದಿನಗಳಿಂದ ಎಸ್.ಕೆ.ಬಸವರಾಜನ್ ಅವರ ನಿವಾಸಕ್ಕೆ ಬೀಗ ಜಡಿಯಲಾಗಿದೆ. ಎಸ್.ಕೆ.ಬಸವರಾಜನ್ ದಂಪತಿ ಗೌಪ್ಯ ಸ್ಥಳದಲ್ಲಿ ಇದ್ದಾರೆ ಎನ್ನಲಾಗಿದೆ. ಇದರ ನಡುವೆ ಭಗೀರಥ ಗುರುಪೀಠದ ಸ್ವಾಮೀಜಿ, ಮುರುಘಾಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಜೊತೆ ಗೌಪ್ಯ ಸ್ಥಳದಲ್ಲಿ ರಾಜಿ ಸಂಧಾನ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರ ನಡುವೆ ನಡೆದ ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಸಂಧಾನ ಸಭೆ ಫಲ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಚಿತ್ರದುರ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್ ಅವರನ್ನು ಸಂಪರ್ಕಿಸಲಾಯಿತು. ಪತ್ರಿಕೆ ಜೊತೆ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ಶನಿವಾರದಿಂದ ನಿರಂತರವಾಗಿ ತನಿಖಾ ತಂಡದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಮಾಡದಂತೆ ನಮಗೆ ರಾಜ್ಯ ಸಮಿತಿ ನಿರ್ದೇಶನ ನೀಡಿದೆ ಎಂದು ಪ್ರಭಾಕರ್ ಪ್ರತಿಕ್ರಿಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!