ಹೊಸದಿಗಂತ ವರದಿ, ಶಿವಮೊಗ್ಗ:
ತೀರ್ಥಹಳ್ಳಿ ತಾಲೂಕಿನಲ್ಲಿ ವಾಸವಿರುವ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಗೆ ಹಕ್ಕುಪತ್ರ ನೀಡುವಂತೆ ಹಾಗೂ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸೆ.26 ರಿಂದ 28 ರವರೆಗೆ ಕರಕುಚ್ಚಿಯಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಪ್ರಮುಖ ಲೋಕೇಶ್ ಕರಕುಚ್ಚಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.26 ರಂದು ಬೆಳಗ್ಗೆ 10 ಗಂಟೆಗೆ ಕರಕುಚ್ಚಿಯಿಂದ ಪಾದಯಾತ್ರೆ ಆರಂಭಿಸಲಾಗುತ್ತದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಇದಕ್ಕೆ ಚಾಲನೆ ನೀಡಲಿದ್ದಾರೆ. ಸೆ.28 ರಂದು ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ತಿಳಿಸಿದರು. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಿಂಗನಮಕ್ಕಿ ಜಲಾಶಯದಿಂದ ಮುಳುಗಡೆ ಯಾದವರನ್ನು ಕಳೆದ 60 ವರ್ಷಗಳ ಹಿಂದೆ ವಿವಿಧ ಸರ್ವೇ ನಂಬರ್ಗಳನ್ನು ತಂದು ಬಿಡಲಾಗಿತ್ತು. ಅಂದಿನಿಂದಲೂ ಕೃಷಿ ಮಾಡಿಕೊಂಡು ಜೀವನ ಸಾಗಿರುತ್ತಿರುವ ಸಂತ್ರಸ್ತರಿಗೆ ಇದುವರೆಗೂ ಭೂಮಿ ಹಕ್ಕು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.