ಹೊಸ ದಿಗಂತ ವರದಿ, ಚಿತ್ರದುರ್ಗ:
ಚಿಕ್ಕ ವಯಸ್ಸಿನಲ್ಲಿಯೇ ನಟನೆಯ ಮೂಲಕ ಚಿತ್ರರಂಗ ಪ್ರವೇಶಿಸಿದ ಪುನೀತ್ ರಾಜ್ಕುಮಾರ್ ವಿಧಿವಶರಾಗಿರುವುದು ಕೋಟ್ಯಾಂತರ ಅಭಿಮಾನಿಗಳ ಮನಸ್ಸಿಗೆ ನೋವುಂಟಾಗಿದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಬೇಸರ ವ್ಯಕ್ತಪಡಿಸಿದರು.
ಶಾರದಾ ಬ್ರಾಸ್ ಬ್ಯಾಂಡ್ ವತಿಯಿಂದ ಶನಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ದಾಂಜಲಿ ಮೆರವಣಿಗೆಗೆ ಪುನೀತ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮುರುಘಾಶರಣರು ಅಮೋಘವಾದ ನಟನೆಯ ಮೂಲಕ ಅಭಿಮಾನಿಗಳಿಂದ ಪವರ್ಸ್ಟಾರ್ ಎಂದು ಕರೆಸಿಕೊಂಡ ಪುನೀತ್ ರಾಜ್ಕುಮಾರ್ ಅಗಲಿಕೆ ಕರುನಾಡನ್ನೇ ದುಃಖದಲ್ಲಿ ಮುಳುಗಿಸಿದೆ. ಭಗವಂತ ಅವರ ಕುಟುಂಬಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿರುವ ಪುನೀತ್ ರಾಜ್ಕುಮಾರ್ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು. ತಾನೊಬ್ಬ ಮೇರುನಟ ಎಂದು ಎಲ್ಲಿಯೂ ಗರ್ವದಿಂದ ಬೀಗಲಿಲ್ಲ. ಅವರಲ್ಲಿರುವ ವಿನಯತೆ ಈ ಮಟ್ಟಕ್ಕೇರಲು ನೆರವಾಯಿತು ಎಂದು ಶರಣರು ಹೇಳಿದರು.
ಶಾರದ ಬ್ರಾಸ್ ಬ್ಯಾಂಡ್ನ ಮುಖ್ಯಸ್ಥ ಎಸ್.ವಿ.ಗುರುಮೂರ್ತಿ, ಜಿ.ಸಾಯಿಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಸಿ.ನಿರಂಜನಮೂರ್ತಿ, ಹೆಚ್.ಮಂಜಪ್ಪ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಗರಸಭೆ ಮಾಜಿ ಉಪಾಧ್ಯಕ್ಷ ಬಿ.ರಾಮಜ್ಜ, ತಿಪ್ಪೇಸ್ವಾಮಿ, ರುದ್ರೇಶ್, ಪಿ.ಸಿ.ವೀರಣ್ಣ, ಕಾಂಗ್ರೆಸ್ ಮುಖಂಡ ಚಿದಾನಂದಮೂರ್ತಿ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾವಪೂರ್ಣ ಶ್ರದ್ದಾಂಜಲಿ ಮೆರವಣಿಗೆ ರಂಗಯ್ಯನಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿತು. ಶಾರದ ಬ್ರಾಸ್ ಬ್ಯಾಂಡ್ನ ಕಲಾವಿದರು ಡಾ.ರಾಜ್ ಮತ್ತು ಪುನೀತ್ ರಾಜ್ಕುಮಾರ್ ಅವರ ಅಮರ ಗೀತೆಗಳನ್ನು ಹಾಡಿ ಶ್ರದ್ದಾಂಜಲಿ ಸಲ್ಲಿಸಿದರು.
ಶ್ರದ್ದಾಂಜಲಿ ಮೆರವಣಿಗೆ ಸಾಗಿದ ರಸ್ತೆಯ ಎರಡು ಬದಿಗಳಲ್ಲಿ ಅಭಿಮಾನಿಗಳು ನಿಂತು ಸಂತಾಪ ಸೂಚಿಸಿದರು.