spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶೀಷೆ ಸೇರಿದ್ದ ಬದುಕಲ್ಲಿ ಹೊಸ ಕಿರಣ: ಮದ್ಯ ವ್ಯಸನಿಗಳ ಮನೆ, ಮನದ ಕಣ್ಣೀರು ಒರೆಸುತ್ತಿದ್ದಾರೆ ಮಜಿಬೈಲಿನ ಯುವಕ!

- Advertisement -Nitte
  • ಬಾಳೇಪುಣಿ

ಹೊಸ ದಿಗಂತ ವರದಿ, ಮಂಗಳೂರು:

ಕಿರಣ್‌ಕುಮಾರ್ ಮಂಜೇಶ್ವರ ಬಳಿಯ ಮಜಿಬೈಲಿನವರು. ಎಂಟನೆಯ ತರಗತಿ ಓದಿರುವ 38ರ ಹರೆಯದ ಇವರು ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನವ ಜೀವನ ನಡೆಸುತ್ತಿದ್ದಾರೆ.
ಸಣ್ಣ ಪ್ರಾಯದಲ್ಲಿಯೇ ಕೆಂಪು ಕಲ್ಲಿನ ಪಾಯ, ಲಾರಿ ಎಲ್ಲವೂ ಕೈಗೂಡಿತ್ತು. ಒಳ್ಳೆಯ ಆದಾಯ ಇತ್ತು. ಆಳುಗಳಿಗೆ ಬುಧವಾರ ಮುಂಗಡ, ಶನಿವಾರ ಸಂಬಳ ಬಟವಾಡೆ ಮಾಡಿ ಮನೆಗೆ ಮರಳುತ್ತಿದ್ದರು. ಅದ್ಯಾವ ಕೆಟ್ಟ ಘಳಿಗೆಯೋ ಗೊತ್ತಿಲ್ಲ; ಕಿರಣ್ ಸಾರಾಯಿ ಚಟಕ್ಕೆ ಬಿದ್ದರು. ಆರಂಭದಲ್ಲಿ ಶೇಂದಿ, ಮುಂದೆ ಬಿಯರ್, ಬಳಿಕ ಸಾರಾಯಿ ಹಂತಕ್ಕೆ ತಲುಪಿ ಬದುಕಿನ ಟ್ರ್ಯಾಕ್ ತಪ್ಪಿತು.
ಮನೆಗೆ ಬರುವ ಸಮಯ ಬದಲಾಯಿತು. ನಿತ್ಯ ತಾಯಿ ಮತ್ತು ತಂಗಿ ಕಾಯುತ್ತಾ ಕುಳಿತುಕೊಳ್ಳುವುದು, ತಂದೆ ಮಂಜೇಶ್ವರದ ದಾರಿಯಾಗಿ ಹೊರಟು ಚಿಗುರುಪಾದೆ ಸುತ್ತಿ ರಾತ್ರಿ ಮಗನನ್ನು ಹುಡುಕುವುದು ಪರಿಪಾಠ ವಾಯಿತು. ಕೆಲವೊಮ್ಮೆ ತಾಯಿ ಅನ್ನ ಬಡಿಸಿಟ್ಟು ನಡುರಾತ್ರಿಯ ತನಕ ಕಾಯುವುದು ಇತ್ತು. ಎಷ್ಟು ದುಡ್ಡು ಬಂದರೂ ಸಾರಾಯಿ ಅಂಗಡಿಗೆ ಸಂದಾಯವಾಗುತ್ತಿತ್ತು.
ನಶೆಗಾಗಿ ಗೆಳೆಯರಿಂದ ಸಾಲ ಪಡೆದರು
ಕೈಯಲ್ಲಿ ಕಾಸಿಲ್ಲದಾಗ ಪರಿಚಯಸ್ಥರು, ಗೆಳೆಯರಿಂದ ಸಾಲ ಪಡೆದು ನಶೆ ಏರಿಸಿಕೊಳ್ಳು ವುದು ಸಾಮಾನ್ಯ ಸಂಗತಿಯಾಯಿತು. ತಂದೆ ಸಾಲ ಮೂಲ ಮಾಡಿ ಪಾಯಕ್ಕೆ ಹೂಡಿಕೆ ಮಾಡಿದ್ದು ಕರಗಿ ಹೋಯಿತು. ಲಾರಿ, ಮೆಶಿನ್, ಜಾಗ ಎಲ್ಲವನ್ನೂ ಕಳೆದುಕೊಂಡ ಕಿರಣ್ ಲಾರಿಯಲ್ಲಿ ಲೋಡಿಂಗ್ ಕೆಲಸಕ್ಕೆ ಹೋಗಲಾರಂಭಿಸಿದರು. ತಾಯಿಯ, ತಂಗಿಯ ಚಿನ್ನವೂ ಮನೆಯಿಂದ ಮಾಯವಾಯಿತು. ಮನೆ ಮಸಣಕ್ಕೆ ಸಮವಾಯಿತು.
ಬದುಕು ಬದಲಿಸಿದ ತಾಯಿ ಮಾತು
ಒಂದು ದಿನ ತಾಯಿ ದಯಾವತಿ ಕೇಳಿಯೇ ಬಿಟ್ಟರು ‘ನಿನಗೆ ನಾನು ಬೇಕಾ, ಸಾರಾಯಿ ಬೇಕಾ?’ ಎಂದು. ಕಿರಣ್ ‘ನೀವು ಬೇಕು’ ಎಂದಾಗ ‘ಹಾಗಾದರೆ ಕುಡಿತವನ್ನು ಬಿಡಬೇಕು. ನಿನ್ನಿಂದಾಗಿ ನಮಗೆ ಹೊರಗೆ ಹೋಗುವುದಕ್ಕೆ ನಾಚಿಕೆಯಾಗುತ್ತದೆ’ ಎಂದು ಕಣ್ಣೀರು ಸುರಿಸಿದರು. ಇರಾದಲ್ಲಿರುವ ಮಾವನ ಸಹಕಾರ ಪಡೆದು 2011ರ ಸೆಪ್ಟೆಂಬರ್‌ನಲ್ಲಿ ಮಂಚಿಯಲ್ಲಿ ಜರುಗಿದ ಮದ್ಯ ವರ್ಜನ ಶಿಬಿರದಲ್ಲಿ ಕಿರಣ್ ಶಿಬಿರಾರ್ಥಿಯಾದರು. ಅಲ್ಲಿಂದ ಹೊರ ಬಂದ ಕಿರಣ್ ಬದುಕು ಮತ್ತೆ ಚಿಗುರಲು ಶುರು ಆಯಿತು. ವರ್ಷದ ಬಳಿಕ ವಿವಾಹ ಆದರು. ಪಾವಳ, ಇರಾದಲ್ಲಿ ನವ ಜೀವನ ಸಮಿತಿಗಳಲ್ಲಿ ಸೇರಿಕೊಂಡು ಚಟುವಟಿಕೆ ಆರಂಭಿಸಿದರು. ಪಾವಳದಲ್ಲಿ ನವಜೀವನ ಸಮಿತಿಯ ಸ್ಥಾಪಕ ಅಧ್ಯಕ್ಷರಾದರು. ಜನ ಜಾಗೃತಿ ವೇದಿಕೆಯ ಚಟುವಟಿಕೆಗಳನ್ನು ವಿಸ್ತರಿಸುವ ದಿಸೆಯಲ್ಲಿ ಮೀಂಜದಲ್ಲಿ ನವಜೀವನ ಸಮಿತಿ ಕಟ್ಟಿದರು. ಕಿರಣ್ ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೀಂಜ ಒಕ್ಕೂಟದ ವಲಯ ಅಧ್ಯಕ್ಷರು.
‘ನಮ್ಮ ಮನೆಯಲ್ಲಿ ತಂದೆ, ತಾಯಿ, ತಂಗಿಯ ಕಣ್ಣೀರು ನೋಡಿದ್ದೇನೆ. ಅದು ಈಗಲೂ ನನ್ನ ಕಣ್ಣ ಮುಂದೆ ಕಟ್ಟುತ್ತದೆ. ಈಗ ನಾನು ಬೇರೆ ಮನೆಗಳ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದ್ದೇನೆ. ದುಶ್ಚಟದಿಂದ ಬದುಕು ಕಳೆದುಕೊಳ್ಳುತ್ತಿರುವ ಮಂದಿಯಲ್ಲಿ ಬೆಳಕು ಮೂಡಿಸುವುದು, ಆ ಮನೆಗಳ ಕಣ್ಣೀರು ಒರೆಸುವುದು ನನ್ನ ಉದ್ದೇಶವಾಗಿದೆ. ಹೆಸರಿಗೆ ಮಾಡುತ್ತಿಲ್ಲ, ಇದು ದೇವರ ಕೆಲಸವೆಂಬ ವಿಶ್ವಾಸದಿಂದ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕಿರಣ್‌ಕುಮಾರ್.
ಬಂಧುಗಳು ನನ್ನನ್ನು ಬಿಟ್ಟು ಹಾಕಿಲ್ಲ
ನಾನು ಸಂಪೂರ್ಣ ಸೋತಾಗ ಆದರಿಸಿ ದವರು ತಂದೆ, ತಾಯಿ, ಚಿಕ್ಕಪ್ಪಂದಿರು ಮತ್ತು ಅತ್ತೆ-ಮಾವಂದಿರು. ಇಂದೂ ಅವರೇ ನನ್ನನ್ನು ಆದರಿಸುತ್ತಿದ್ದಾರೆ. ಸಾರಾಯಿ ದಾಸನಾಗಿದ್ದ ಸಂದರ್ಭದಲ್ಲೂ ನಾನು ಹಿರಿಯರ ಜೊತೆಗೆ ಎಂದೂ ಅನುಚಿತ ವರ್ತನೆ ತೋರಿದ್ದಿಲ್ಲ. ಅದೇ ಕಾರಣಕ್ಕೆ ಇಂದಿಗೂ ಬಂಧುಗಳು ನನ್ನನ್ನು ಬಿಟ್ಟು ಹಾಕಿಲ್ಲ. ಅನೇಕ ತಾಯಂದಿರ ಕಣ್ಣೀರು ಒರೆಸುವ ಅವಕಾಶವನ್ನು ದೇವರು ನನಗೆ ಕರುಣಿಸಿದ್ದಾರೆ ಎಂದು ಕಿರಣ್ ಮನದಾಳದಿಂದ ಹೇಳುತ್ತಾರೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss