ಚಿಪ್ಪು ಹಂದಿಯ ಚಿಪ್ಪು ಮಾರಾಟ ಯತ್ನ: ಮೂವರನ್ನು ಸೆರೆಹಿಡಿದ ಅರಣ್ಯಾಧಿಕಾರಿಗಳು

ಹೊಸದಿಗಂತ ವರದಿ, ಮಡಿಕೇರಿ
ಚಿಪ್ಪು ಹಂದಿಯ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಕುಶಾಲನಗರ ತಾಲೂಕು ತ್ಯಾಗತ್ತೂರು-ವಾಲ್ನೂರು ಗ್ರಾಮ ನಿವಾಸಿ ಜೆ.ಎ. ರಾಜು, ವೀರಾಜಪೇಟೆ ತಾಲೂಕು ಅರಮೇರಿ ಗ್ರಾಮ ನಿವಾಸಿ ಹೆಚ್.ಜಿ. ನಿಖಿಲ್ ಹಾಗೂ ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮ ನಿವಾಸಿ ವಿ.ಪಿ. ಚಂದ್ರ ಹೊದ್ದೂರು ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ವಿವರ:
ಏ.27ರಂದು ಕೈಕೇರಿ ಗ್ರಾಮದ ಕಾವೇರಿ ಕಾಲೇಜಿನ ಮುಂಭಾಗದ ಸಾರ್ವಜನಿಕ ಬಸ್ ತಂಗುದಾಣದ ಬಳಿ 3 ವ್ಯಕ್ತಿಗಳು ಪ್ಲಾಸ್ಟಿಕ್ ಚೀಲದಲ್ಲಿ ಚಿಪ್ಪು ಹಂದಿಯ ಚಿಪ್ಪುಗಳನ್ನು(ಪೆಂಗೋಲಿಯನ್ ಚಿಪ್ಪುಗಳು) ತುಂಬಿಕೊಂಡು ಬರುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ವೀರಾಜಪೇಟೆ ತಾಲೂಕು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.
ಆರೋಪಿಗಳಿಂದ 8 ಕೆ.ಜಿ. 750 ಗ್ರಾಂ ಪೆಂಗೋಲಿಯನ್ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದ್ದು, ವನ್ಯ ಜೀವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪೊನ್ನಂಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.
ಪೊಲೀಸ್ ಮಹಾ ನಿರೀಕ್ಷಕ ಕೆ.ಎ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎನ್.ಟಿ. ಶ್ರೀನಿವಾಸ್ ರೆಡ್ಡಿ ಮಾರ್ಗದರ್ಶನದಲ್ಲಿ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್.ದೇವಯ್ಯ, ಸಿ.ಬಿ.ಬೀನ, ಎಸ್.ಎಂ ಯೋಗೇಶ್, ಪಿ.ಯು. ಮುನೀರ್, ಆರ್.ನಂದ ಕುಮಾರ್ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!