ಹೊಸ ದಿಗಂತ ವರದಿ, ಚಿತ್ರದುರ್ಗ:
ಕುರಿಗಾಹಿ ವ್ಯಕ್ತಿಯನ್ನು ಕೊಲೆ ಮಾಡಿ ಕುರಿಗಳನ್ನು ಕದ್ದೊಯ್ದಿದ್ದ ಮೂರು ಜನ ಆರೋಪಿಗಳನ್ನು ಚಿತ್ರದುರ್ಗ ಗ್ರಾಮಾಂತರ ವೃತ್ತದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿರಿಗೆರೆ ಗ್ರಾಮದ ರವಿ, ರಘು ಹಾಗೂ ರವಿಕಿರಣ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಸಿರಿಗೆರೆ ಗ್ರಾಮದ ರುದ್ರಮ್ಮ ಅವರ ಬಳಿ ಕುರಿ ಕಾಯುವ ಕೆಲಸ ಮಾಡುತ್ತಿದ್ದ ರಾಮಜ್ಜ (60) ಏ.10 ರಂದು ಕುರಿಗಳನ್ನು ಮೇಯಿಸಲು ಸಿರಿಗೆರೆ ಗ್ರಾಮದ ಗಂಗಾಧರಪ್ಪ ತೋಟದ ಕಡೆಗೆ ಹೋಗಿದ್ದರು. ಸಂಜೆಯಾದರೂ ರಾಮಜ್ಜ ಮತ್ತು ಕುರಿಗಳು ವಾಪಾಸು ಮನೆಗೆ ಬಂದಿರಲಿಲ್ಲ. ರಾತ್ರಿ 8.30 ರ ಸುಮಾರಿಗೆ ಕುರಿಗಳು ಮಾತ್ರ ಮನೆಗೆ ಬಂದಿದ್ದವು. ಆದರೆ ಕುರಿಗಳಲ್ಲಿ 5 ಕುರಿಗಳು ಕಡಿಮೆ ಇದ್ದವು ಎಂದರು.
ರಾಮಜ್ಜನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಏ.14 ರಂದು ಬೆಳಿಗ್ಗೆ ನಾಗರಾಜ ಮತ್ತು ಚಂದ್ರಪ್ಪ ಎಂಬುವರು ಅವರ ಪಕ್ಕದ ಗಂಗಾಧರಪ್ಪನವರ ತೋಟದಲ್ಲಿ ಯಾವುದೋ ಮೃತ ದೇಹದ ವಾಸನೆ ಬರುತ್ತಿತ್ತು. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಕುರಿಗಾಹಿ ರಾಮಜ್ಜನನ್ನು ದುಷ್ಕರ್ಮಿಗಳು ಕೊಲೆ ಮಾಡಿ, ಶವವನ್ನು ಅಡಿಕೆ ಗರಿಗಳಿಂದ ಮುಚ್ಚಿರುವುದು ಕಂಡುಬಂದಿದೆ. ಈ ಕುರಿತು ರುದ್ರಮ್ಮ ಅವರು ನೀಡಿದ ದೂರಿನನ್ವಯ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಏ.15 ರಂದು ಮೂರು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಒಂದು ಬೈಕ್ ಹಾಗೂ ಕಳವು ಮಾಡಿದ್ದ 65 ಸಾವಿರ ರೂ. ಮೌಲ್ಯದ 5 ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತದೇಹ ಪತ್ತೆಯಾದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮೆಚ್ಚುಗೆ ವ್ಯಕ್ತಪಡಿಸಿದರು.