ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ,ಮೈಸೂರು:
ಕೋವಿಡ್ನಿಂದ ಮನೆಯಲ್ಲೇ ಪ್ರತ್ಯೇಕವಾಗಿರುವವರ ಚಿಕಿತ್ಸೆಗೆ ಅಗತ್ಯ ಔಷಧಿ ತಲುಪುತ್ತಿಲ್ಲ. ಅವರಿಗೆ ಜಿಲ್ಲಾಡಳಿತ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.
ಭಾನುವಾರ ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಆರ್.ನಗರ ಕ್ಷೇತ್ರದಲ್ಲಿ 528 ಮಂದಿ ಕೋವಿಡ್ನಿಂದಾಗಿ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದಾರೆ. ತಮ್ಮ ಕೈಯಿಂದಲೇ ಹಣ ಕೊಟ್ಟು ಔಷಧಿ ಖರೀದಿಸುತ್ತಿದ್ದಾರೆ. ಈಗಲೂ ಅವರಿಗೆ ಜಿಲ್ಲಾಡಳಿತವತಿಯಿಂದ ಯಾವುದೃ ಔಷಧಿ ತಲುಪಿಸುವವರಿಲ್ಲ. ಜಿಲ್ಲಾಧಿಕಾರಿಗಳು ಕೇವಲ ವಿಡಿಯೊ ಕಾನ್ಫರೆನ್ಸ್ ಮಾಡುವುದರಿಂದ ಏನು ಪ್ರಯೋಜನ ಎಂದು ಟೀಕಿಸಿದರು.
ಕೆ.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಯಾವುದೇ ಟಾರ್ಗೆಟ್ ಕೊಟ್ಟಿಲ್ಲ. ನಮ್ಮ ಕ್ಷೇತ್ರದಲ್ಲಿ ನಮಗೆ ಜನ ಮುಖ್ಯ. ಕೆಲ ಸಂಘ ಸಂಸ್ಥೆಗಳ ಸಹಕಾರದಿಂದ ನಾವು ಔಷಧಿ ಒದಗಿಸುತ್ತಿದ್ದೇವೆ. ಆದರೆ, ಜಿಲ್ಲಾಡಳಿತದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ಮೈಸೂರು ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಿದ್ದಾರೆ. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿದೆ. ವೆಂಟಿಲೇಟರ್ಗಾಗಿ ರೋಗಿಗಳು ಕಾಯುತ್ತಿದ್ದಾರೆ ಅಂತ ಜಿಲ್ಲಾಡಳಿತವೇ ಹೇಳಿದೆ. ಹಾಗಾದರೆ ನಿರ್ವಹಣೆ ಹೇಗೆ? ತಪಾಸಣೆ ಕೂಡ ಸರಿಯಾಗಿ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಕೆ.ಆರ್.ನಗರದಲ್ಲಿ ಕೊರೋನಾ ಸೋಂಕಿನಿAದ ಮೃತಪಡುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಅಲ್ಲಿನ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಸ್ಟೆರಾಯಿಡ್ ನೀಡುತ್ತಿದ್ದಾರೆ. ಇದು ಗೊತ್ತಿದ್ದರೆ ಕ್ರಮ ಏಕೆ ಕೈಗೊಂಡಿಲ್ಲ? ಇದಕ್ಕೆ ಜವಾಬ್ದಾರರು ಯಾರು? ಇದನ್ನು ಕೇಳುವುದೇ ತಪ್ಪಾಗಿದೆ. ವಿರೋಧ ಪಕ್ಷದವರು ಎಚ್ಚರಿಸುವ ಕೆಲಸ ಮಾಡುತ್ತೇವೆ. ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ. ಇಲ್ಲಿ ಯಾರು ಶಾಶ್ವತ ಅಲ್ಲ, ಕಾಲ ಚಕ್ರ ಉರುಳುತ್ತದೆ. ಕೋವಿಡ್ ಮುಗಿಯಲಿ ಕೆಲ ದಾಖಲೆಗಳಿವೆ ಬಿಡುಗಡೆ ಮಾಡುವೆ. ಜಿಲ್ಲಾಧಿಕಾರಿಗಳ ವಿಚಾರವಾಗಿ ದಾಖಲೆ ಬಿಡುಗಡೆ ಮಾಡುವೆ ಎಂದು ತಿಳಿಸಿದರು.
ತಜ್ಞರ ಅಭಿಪ್ರಾಯದಂತೆ ಈಗಾಗಲೇ ಕೊರೋನಾದ ಮೂರನೇ ಅಲೆ ಶುರುವಾಗಿದೆ. ಲಾಕ್ಡೌನ್ನಿಂದ ಶ್ರಮಿಕ ವರ್ಗ ತುಂಬಾ ಸಂಕಷ್ಟ ಅನುಭವಿಸುತ್ತಿದೆ. ಹೋರಾಟದ ಹಿನ್ನೆಲೆಯಿಂದ ಬಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಸಂಕಷ್ಟದಲ್ಲಿರುವವರಿಇಗೆ ಆರ್ಥಿಕವಾಗಿ ಸಹಾಯ ಮಾಡಬೇಕು. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಹಾಗಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಎಲ್ಲಾ ಶಾಸಕರು, ಪರಿಷತ್ ಸದಸ್ಯರ ಒಂದು ವರ್ಷದ ವೇತನ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.