ಹೊಸದಿಗಂತ ವರದಿ, ಶಿವಮೊಗ್ಗ :
ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಫೆ.27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಉದ್ಘಾಟನೆ ಜತೆಗೆ ಇತರೆ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯಲಿದೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 2 ಕಡೆ ಊಟದ ವ್ಯವಸ್ಥೆ ಇದ್ದು ಒಂದೊಂದು ಕಡೆ 100 ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಕಾರ್ಯಕ್ರಮ ವೀಕ್ಷಣೆಗೆ 40 ಕಡೆ ವಿಶಾಲವಾದ ಪ್ರಾಜೆಕ್ಟರ್‌ಗಳನ್ನು ಅಳವಡಿಸಲಾಗುತ್ತದೆ ಎಂದರು.
ವಿವಿಐಪಿ ಹಾಗೂ ವಿಐಪಿ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಪಾಸ್‌ನಲ್ಲಿ ಕಡ್ಡಾಯವಾಗಿ ಭಾವಚಿತ್ರಗಳನ್ನು ಅಂಟಿಸಿಕೊಂಡು ಬರಬೇಕಿದೆ. ಪಾಸ್‌ಗೆ ಅನುಗುಣವಾಗಿಯೇ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಸಭಾಂಗಣ ಹೊರತುಪಡಿಸಿ ನಿಲ್ದಾಣದ ಒಳಗೆ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ವೇದಿಕೆ ಮೇಲೆ ಕೂಡ ಎಸ್‌ಪಿಜಿ ನಿಗದಿಪಡಿಸಿದವರಿಗೆ ಮಾತ್ರ ಅವಕಾಶ. ಡಿಸಿ, ಎಸ್ಪಿಗಳಿಗೂ ಅವಕಾಶವಿಲ್ಲ ಎಂದರು.