ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಧಾನಸಭೆಯಲ್ಲಿ ಶರ್ಟ್ ಕಳಚಿ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಸಂಗಮೇಶ್ ಅವರ ಪ್ರಕರಣವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಕ್ಕುಚ್ಯುತಿ ಸಮಿತಿಗೆ ವಹಿಸಿದ್ದು, ಈ ಸಮಿತಿ ತನಿಖೆ ನಡೆಸಿ ವರದಿ ನೀಡಿದ ಬಳಿಕ ಕ್ರಮ ಜರುಗಿಸಲಾಗುವುದು ಎಂದು ರೂಲಿಂಗ್ ನೀಡಿದರು.
ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆಯೇ ಸಂಗಮೇಶ್ ವಿರುದ್ಧ ಬಿಜೆಪಿಯ ಆರಗ ಜ್ಞಾನೇಂದ್ರ ಮಂಡಿಸಿದ ಹಕ್ಕುಚ್ಯುತಿ ಪ್ರಸ್ತಾವವನ್ನು ಹಕ್ಕುಚ್ಯುತಿ ಸಮಿತಿಗೆ ವಹಿಸುವ ಕುರಿತು ಆದೇಶ ನೀಡಿದ ಸಭಾಧ್ಯಕ್ಷರು, ಸದನದಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಹಗುರವಾದ ರಾಜಕಾರಣ ಸಲ್ಲದು, ರಾಜಕಾರಣವನ್ನು ಹೊರಗೆ ಇಟ್ಟುಕೊಳ್ಳಬೇಕು. ಸದಸ್ಯರ ವರ್ತನೆಯಿಂದ ಪೀಠಕ್ಕೆ ಅಗೌರವವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಹಕ್ಕುಚ್ಯುತಿ ಸಮಿತಿಗೆ ಈ ಪ್ರಕರಣವನ್ನು ವಹಿಸುತ್ತಿದ್ದೇನೆ.ನಿಯಮಾವಳಿಗಳಂತೆ ಹಕ್ಕುಚ್ಯುತಿ ಪ್ರಸ್ತಾವದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು. ಆದರೆ, ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಚರ್ಚೆಗೆ ಅವಕಾಶ ಇಲ್ಲ. ಹಾಗಾಗಿ ಈ ಪ್ರಸ್ತಾವವನ್ನು ಹಕ್ಕುಚ್ಯುತಿ ಸಮಿತಿಗೆ ವಹಿಸುತ್ತಿದ್ದೇನೆ ಎಂದರು.
ಹಕ್ಕುಚ್ಯುತಿಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಮುಂದಿನ ಪೀಠಕ್ಕೆ ಆಗಮಿಸಿ ಧರಣಿಯನ್ನು ಆರಂಭಿಸಿದರು. ಈ ಧರಣಿ, ಗದ್ದಲದ ನಡುವೆಯೇ ಮಾತನಾಡಿದ ಗೃಹ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಸಂಗಮೇಶ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ. ಇಡೀ ಸದನಕ್ಕೆ ಅಪಮಾನವಾಗಿದೆ. ಅವರು ಮಾಡಿದ್ದನ್ನು ಅಶ್ಲೀಲ ಅಲ್ಲ, ಶೀಲ ಎಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಬಟ್ಟೆ ಬಿಚ್ಚುವುದು ಸರಿಯೇ? ವಿಧಾನಸಭೆಯಲ್ಲಿ ಹಿಂದೆಂದೂ ಈ ರೀತಿ ನಡೆದಿರಲಿಲ್ಲ ಎಂದರು.
ಇಷ್ಟಾದರೂ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ ಮುಂದುವರೆಸಿದರು. ಈ ಗದ್ದಲ ನಡುವೆಯೇ ಸಭಾಧ್ಯಕ್ಷರು ಆರಗ ಜ್ಞಾನೇಂದ್ರ ಅವರಿಗೆ ಹಕ್ಕುಚ್ಯುತಿ ಪ್ರಸ್ತಾವವನ್ನು ಮುಂದುವರೆಸುವಂತೆ ಸೂಚಿಸಿದರು.